ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ: ತಿರುಪತಿ ಯಾತ್ರಾರ್ಥಿಗಳು ಸಾವು

ರಾಮನಗರ, ಡಿಸೆಂಬರ್ 24: ಶನಿವಾರ ಬೆಳಂಬೆಳಗ್ಗೆ ಬೆಂಗಳೂರು ಮೈಸೂರು ದಶಪಥ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಕ್ಯಾಂಟರ್ ಹಾಗೂ ಟೆಂಪೂ ಟ್ರಾವೆಲ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಿರುಪತಿ ಯಾತ್ರಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ಮಂಡ್ಯ ಜಿಲ್ಲೆಯ ಪಾಂಡವಪುರದ ಚಿಕ್ಕಾಡೆ ಗ್ರಾಮದ ಮಹೇಶ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಮೃತರು ಮಂಡ್ಯ ಜಿಲ್ಲೆಯ ಪಾಂಡವಪುರದ ಚಿಕ್ಕಾಡೆ ಗ್ರಾಮದಿಂದ ಆಂಧ್ರಪ್ರದೇಶದ ತಿರುಪತಿಗೆ ತೆರಳಿದ್ದರು. ತಿರುಮಲದ ತಿಮ್ಮಪ್ಪನ ದರ್ಶನ ಪಡೆದು ಗ್ರಾಮಕ್ಕೆ ವಾಪಸ್ಸು ಮರಳುವ ಮಾರ್ಗದಲ್ಲಿ ಅವಘಡ ಸಂಭವಿಸಿದೆ.
ಮಂಡ್ಯ ಚಿಕ್ಕಾಡೆ ಗ್ರಾಮದಿಂದ ಆಂಧ್ರಪ್ರದೇಶದ ತಿರುಪತಿಗೆ ಟೆಂಪೂ ಟ್ರಾವೆಲ್ ವಾಹನದಲ್ಲಿ ಪ್ರವಾಸ ತೆರಳಿದ್ದ ಗ್ರಾಮಸ್ಥರು ತಿಮ್ಮಪ್ಪನ ದರ್ಶನ ಪಡೆದು ಗ್ರಾಮಕ್ಕೆ ಹಿಂದಿರುಗುವಾಗ ಚನ್ನಪಟ್ಟಣದ ಮುದಗೆರೆ ಬಳಿ ಕ್ಯಾಂಟರ್ ವಾಹನಕ್ಕೆ ಹಿಂಭಾಗದಿಂದ ತಿರುಪತಿ ಯಾತ್ರಾರ್ಥಿಗಳಿದ್ದ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಟೆಂಪೂ ಟ್ರಾವೆಲ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗು ಮಂಡ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಬೆಳಗಿ ನಸುಕಿನ ಜಾವದಲ್ಲಿ ನಡೆದ ಅಪಘಾತಕ್ಕೆ ಮಂಜು ಮುಸುಕಿದ ವಾತಾವರಣ ಅಥವಾ ಚಾಲಕ ರಾತ್ರಿ ವಿಶ್ರಾಂತಿ ಪಡೆಯದೆ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿ ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಿರುಪತಿಯ ತಿಮ್ಮಪ್ಪ ದರ್ಶನ ಪಡೆದು ಬೆಳಗಿನ ಹೊತ್ತಿಗೆ ಗ್ರಾಮಕ್ಕೆ ತಲುಪುವ ದಾವಂತದಲ್ಲಿ ಯಾತ್ರಾರ್ಥಿಗಳು ಇನ್ನು ಕೇವಲ 1:30 ಗಂಟೆ ಪ್ರಯಾಣವನ್ನು ಯಾವುದೇ ತೊಂದರೆ ಇಲ್ಲದೇ ಸಾಗಿದ್ದರೆ ಗ್ರಾಮ ತಲುಪುತ್ತಿದ್ದರು. ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.