ಬಿಜೆಪಿ ನಾಯಕರಿಗೂ ಬಹಿರಂಗ ಆಹ್ವಾನ ನೀಡಿದ ಕಾಂಗ್ರೆಸ್‌

ಬಿಜೆಪಿ ನಾಯಕರಿಗೂ ಬಹಿರಂಗ ಆಹ್ವಾನ ನೀಡಿದ ಕಾಂಗ್ರೆಸ್‌

ವದೆಹಲಿ, ಡಿಸೆಂಬರ್‌ 24: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಗೆ ಬಿಜೆಪಿ ನಾಯಕರಿಗೂ ಬಹಿರಂಗ ಆಹ್ವಾನವಿದೆ ಎಂದು ಕಾಂಗ್ರೆಸ್‌ ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾಗುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, 'ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶವು ಮತ ಚಲಾಯಿಸಿದಾಗ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು' ಎಂದು ಹೇಳಿದ್ದಾರೆ.

ಇದೇ ವೇಳೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖೇರಾ, 2024 ರ ಸಾರ್ವತ್ರಿಕ ಚುನಾವಣೆಗೆ ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ. '2024ನೇ ವರ್ಷ ಮಾತ್ರ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಆದರೆ ನೀವು ನಮ್ಮನ್ನು ಕೇಳಿದರೆ, ನಮಗೆ ರಾಹುಲ್ ಗಾಂಧಿ ಬೇಕು' ಎಂದು ಖೇರಾ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡುವಾಗ ತಿಳಿಸಿದ್ದಾರೆ.

ಜೈರಾಮ್ ರಮೇಶ್, ಯೋಗೇಂದ್ರ ಯಾದವ್ ಸೇರಿದಂತೆ ಪ್ರಮುಖ ನಾಯಕರು ದೆಹಲಿಯಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

2024 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್‌ನಲ್ಲಿ ಆರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ, ಇದುವರೆಗೆ ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಎಂಟು ರಾಜ್ಯಗಳಲ್ಲಿ ಸಂಚರಿಸಿದೆ.

ಪಕ್ಷದ ನಾಯಕರು ಶನಿವಾರ ಸಂಜೆ ಕೆಂಪು ಕೋಟೆ ಮತ್ತು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ರಾಜೀವ್ ಗಾಂಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ.

ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್‌ನ ಪ್ರಮುಖ ನಾಯಕ ಜೈರಾಮ್ ರಮೇಶ್‌, ಬಿಜೆಪಿ ಪಕ್ಷದ ನಾಯಕರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಥವಾ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾರತ್ ಜೋಡೋ ಯಾತ್ರೆಗೆ ಸೇರಲು ನಮ್ಮ ಸ್ವಾಗತವಿದೆ. ಭಾರತವನ್ನು ಒಗ್ಗೂಡಿಸಲು ಮತ್ತು ದ್ವೇಷವನ್ನು ದೂರವಿಡಲು ನಂಬುವ ಯಾರಾದರೂ ಈ ಯಾತ್ರೆಗೆ ಸೇರಲು ಸ್ವಾಗತಾರ್ಹ' ಎಂದು ಅವರು ಎಎನ್‌ಐಗೆ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಗೆ ತಲುಪಿರುವ ಯಾತ್ರೆಯು ಈಗಾಗಲೇ 108 ದಿನಗಳನ್ನು ಪೂರೈಸಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಯು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣಗಳಲ್ಲಿ ಯಾತ್ತೆ ಸಂಚರಿಸಿದೆ. ಪ್ರಸ್ತುತ ದೆಹಲಿಯಲ್ಲಿರುವ ಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ.