ಧಾರವಾಡದಲ್ಲಿ ಜನವರಿ 12 ರಂದು ಪ್ರಧಾನಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಧಾರವಾಡ : ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಜನವರಿ 12 ರಿಂದ ಜನವರಿ 16 ರವರೆಗೆ ಧಾರವಾಡ- ಹುಬ್ಬಳ್ಳಿ ಮಹಾನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಯುಕ್ತವಾಗಿ ರಾಷ್ಟ್ರೀಯ ಯುವಜನೋತ್ಸವ ಆಯೋಜಸಲಿದ್ದು, ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಯುವಜನೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.
ಯುವಜನೋತ್ಸವ ಆಯೋಜನೆಗಾಗಿ ಧಾರವಾಡ ಮಹಾನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ನಂತರ ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ, ಜನವರಿ 12 ರಿಂದ 16 ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರಾಜ್ಯಗಳ ಸುಮಾರು 7,500 ಕ್ಕೂ ಹೆಚ್ಚು ಜನ ಪ್ರತಿನಿಧಿಗಳು, ಆಯಾ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳು ಭಾಗವಹಿಸಿ, ತಮ್ಮ ಕಲೆ, ಸಂಸ್ಕೃತಿ ಗಳನ್ನು ಬಿಂಬಿಸಲಿದ್ದಾರೆ.
ರಾಷ್ಟ್ರೀಯ ಯುವಜನೋತ್ಸವದಲ್ಲಿ ಆಹಾರ ಮೇಳ ಆಯೋಜಿಸಿದ್ದು, ವಿವಿಧ ರಾಜ್ಯಗಳ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವೂ ನಡೆಯಲಿದೆ. ರಾಷ್ಟ್ರೀಯ ಯುವಜನೋತ್ಸವನ್ನು ಯಶಸ್ವಿಯಾಗಿ ಸಂಘಟಿಸಲು ಮತ್ತು ರಾಷ್ಟ್ರಕ್ಕೆ ಧಾರವಾಡದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಆಹಾರ ಉತ್ಪನ್ನಗಳನ್ನು ಪರಿಚಯಿಸಲು ಜಿಲ್ಲಾಡಳಿತ ಸಿದ್ದತೆ ಆರಂಭಿಸಿದೆ.
ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಕಾರ್ಯಕ್ರಮ, ಚಿತ್ರಕಲೆ, ಸಂಗೀತ, ನೃತ್ಯ, ಹಾಡು, ಯುವ ಸಮಾವೇಶ ಮುಂತಾದವುಗಳ ಆಯೋಜನೆಗೆ ಧಾರವಾಡ ನಗರದಲ್ಲಿ ವಿವಿಧ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ ಎಂದು ಸಚಿವರು ತಿಳಿಸಿದರು.
ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಕೆಸಿಡಿ ಮುಖ್ಯ ಕಟ್ಟಡದ ಮುಂಭಾಗದಲ್ಲಿ ಯುವಜನೋತ್ಸವದ ನಿಮಿತ್ಯ ವಿವಿಧ ರೀತಿಯ ಸಾಂಸ್ಕೃತಿ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸುವ ಸ್ಫರ್ಧಾಳುಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಮತ್ತು ವಿವಿಧ ವಸತಿನಿಲಯಗಳನ್ನು ವಸತಿಗಾಗಿ ಗುರುತಿಸಲಾಗಿದೆ. ಕೆಎಸ್‌ಆರ್ ಟಿಸಿ, ಜಿಲ್ಲಾಡಳಿತದಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.