ಹೈದರಾಬಾದ್‌ನಲ್ಲಿರುವ ʻಕರ್ನಾಟಕ ಸಾಹಿತ್ಯ ಮಂದಿರʼ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ ನೀಡಿದ ಸಿಎಂ ಕೆಸಿಆರ್!

ಹೈದರಾಬಾದ್: ಹೈದರಾಬಾದ್‌ನ ಕಾಚಿಗುಡದಲ್ಲಿರುವ ಕರ್ನಾಟಕ ಸಾಹಿತ್ಯ ಮಂದಿರದ ನವೀಕರಣಕ್ಕಾಗಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಶುಕ್ರವಾರ 5 ಕೋಟಿ ರೂ. ಮಂಜೂರಾತಿ ಪತ್ರವನ್ನು ಅಂಬರಪೇಟೆ ಶಾಸಕ ಕಾಳೇರು ವೆಂಕಟೇಶಂ ಅವರಿಗೆ ಹಸ್ತಾಂತರಿಸಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭಾಂಗಣವನ್ನು ಮರುವಿನ್ಯಾಸಗೊಳಿಸಬೇಕು ಮತ್ತು ಹೈದರಾಬಾದ್‌ನಲ್ಲಿರುವ ಕನ್ನಡಿಗರ ಅಗತ್ಯತೆಗಳನ್ನು ಪೂರೈಸಲು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲು ಅನುವು ಮಾಡಿಕೊಡುವಂತೆ ಮುಖ್ಯಮಂತ್ರಿಗಳು ಶಾಸಕರಿಗೆ ಸಲಹೆ ನೀಡಿದರು. ನವೀಕೃತ ಸಾಹಿತ್ಯ ಮಂದಿರವು ಹೈದರಾಬಾದ್ ಹಾಗೂ ತೆಲಂಗಾಣದ ಇತರ ಭಾಗದ ಕನ್ನಡಿಗರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಅವರು ಆಶಿಸಿದರು.
ಹೈದರಾಬಾದ್‌ನಲ್ಲಿ ದಶಕಗಳಿಂದ ನೆಲೆಸಿರುವ ಇತರ ರಾಜ್ಯಗಳು ಮತ್ತು ಪ್ರದೇಶಗಳ ಜನರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ರಾಜ್ಯ ಸರ್ಕಾರ ಗೌರವಿಸುತ್ತದೆ ಎಂದು ಚಂದ್ರಶೇಖರ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿವಿಧ ಸಮುದಾಯಗಳ ಸಂಗಮವನ್ನು ಸಂಕೇತಿಸುವ 'ಗಂಗಾ ಜಮುನಿ ತೆಹಜೀಬ್' ಅನ್ನು ಪ್ರತಿನಿಧಿಸುವ ಹೈದರಾಬಾದ್‌ನ ಜೀವನ ವಿಧಾನವನ್ನು ಸಂರಕ್ಷಿಸಲು ರಾಜ್ಯ ಸರ್ಕಾರದ ಪ್ರಯತ್ನಗಳು ಮುಂದುವರಿಯುತ್ತದೆ ಎಂದು ಅವರು ಭರವಸೆ ನೀಡಿದರು.
ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಶಾಸಕ ವೆಂಕಟೇಶ, ಕರ್ನಾಟಕ ಸಾಹಿತ್ಯ ಮಂದಿರದ ಪುನರಾಭಿವೃದ್ಧಿಗೆ ಹಣ ಮಂಜೂರು ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದರು.