ಮಾ.10 ರಿಂದ ರಾಜ್ಯಾದ್ಯಂತ ಟ್ರಾನ್ಸ್ ಜೆಂಡರ್ಸ್ ಸಮೀಕ್ಷೆ : ಸಚಿವ ಹಾಲಪ್ಪ ಆಚಾರ್

ಮಾ.10 ರಿಂದ ರಾಜ್ಯಾದ್ಯಂತ ಟ್ರಾನ್ಸ್ ಜೆಂಡರ್ಸ್ ಸಮೀಕ್ಷೆ : ಸಚಿವ ಹಾಲಪ್ಪ ಆಚಾರ್

ಕೊಪ್ಪಳ : 2023-24ನೇ ಸಾಲಿನಲ್ಲಿ ರಾಜ್ಯಾದ್ಯಂತ ಟ್ರಾನ್ಸ್‌ಜೆಂಡರ್ಸ್ಗಳ ಮೂಲ ಹಂತದ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ನಡೆಸಲು ಸರ್ಕಾರವು ನಿರ್ಧರಿಸಿದೆ. ಪ್ರಾಯೋಗಿಕವಾಗಿ ಮಾರ್ಚ್ 10 ರಿಂದ ಏಪ್ರೀಲ್ 24 ರವರೆಗೆ 45 ದಿನಗಳ ಕಾಲ ವಿಜಯಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾರ್ಚ 3ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಟ್ರಾನ್ಸ್‌ಜೆಂಡರ್ಸ್ ಗಳ ಮೂಲ ಹಂತದ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಮೀಕ್ಷೆ ಕಾರ್ಯಕೈಗೊಳ್ಳಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದ್ದು, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಮೊಬೈಲ್-ಒನ್) ಮೂಲಕ ಕರ್ಮನಿ ವೆಬ್ ಅಪ್ಲಿಕೇಶನ್ ಸಿದ್ಧಪಡಿಸಿದ್ದು, ಈ ವೆಬ್ ಅಪ್ಲಿಕೇಶನ್ ಮೂಲಕ ಟ್ರಾನ್ಸ್ಜೆಂಡರ್ಸಗಳ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈ ಸಮೀಕ್ಷೆಯನ್ನು ತಾಲ್ಲೂಕು ಮಟ್ಟದಲ್ಲಿ ಪೂರ್ವ ನಿಗದಿತ ಸ್ಥಳಗಳಲ್ಲಿ 45 ದಿನಗಳ ಕಾಲ ಸಮೀಕ್ಷ ಕಾರ್ಯ ಕೈಗೊಳ್ಳಲಾಗುತ್ತಿದೆ. ಟ್ರಾನ್ಸ್‌ಜೆಂಡರ್ ಸಮುದಾಯದವರ ಮೂಲಕವೇ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿರುವುದು ಈ ಸಮೀಕ್ಷೆಯ ವಿಶೇಷತೆಯಾಗಿದೆ. ಈ ಸಮೀಕ್ಷೆ ನಡೆಸುವ ಸಮುದಾಯದ ವ್ಯಕ್ತಿಗಳಿಗೆ ಈಗಾಗಲೇ ತಾಂತ್ರಿಕ ತರಬೇತಿ ನೀಡಲಾಗಿದೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಸಂವೇದನೆ ಮೂಡಿಸುವ ತರಬೇತಿ ನೀಡಲಾಗಿದೆ. ಈ ಬಗ್ಗೆ ಮೈಸೂರು ಮತ್ತು ವಿಜಯಪುರ ಜಿಲ್ಲೆಗಳ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗು ಸಹ ತರಬೇತಿ ನೀಡಲಾಗಿದೆ. ಮೂಲ ಹಂತದ ಸಮೀಕ್ಷೆಯಲ್ಲಿ 7 ವಿಭಾಗಗಳಡಿ ವ್ಯಕ್ತಿಗತ ವಿವರಗಳು, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಹೆಚ್ಚುವರಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು.

ಟ್ರಾನ್ಸ್‌ಜೆಂಡರ್ಸ್ಗಳನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ, ಅಗತ್ಯವಾದ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಮೀಕ್ಷೆ ನಡೆಸುತ್ತಿದ್ದು, ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಒದಗಿಸಲು ಈ ಸಮುದಾಯದವರ ಶೈಕ್ಷಣಿಕ ಮಟ್ಟ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮಾಹಿತಿಯು ಅತೀ ಅಗತ್ಯವಾಗಿದೆ. ಮಾಹಿತಿ ಕೊರತೆಯು ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಸಬಲೀಕರಣಕ್ಕೆ ಅಡ್ಡಿಯಾಗಿರುತ್ತದೆ. ಏಕೆಂದರೆ ಈ ಸಮುದಾಯದ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಮೂಲ ದತ್ತಾಂಶ ಅವಶ್ಯಕವಿರುತ್ತದೆ ಎಂದು ವಿವರಿಸಿದರು.

ಟ್ರಾನ್ಸ್ಜೆಂಡರ್ಸರವರ ಮೂಲ ಹಂತದ ಸಮೀಕ್ಷೆಯು ವಿವಿಧ ಹಂತಗಳಲ್ಲಿ ಸಮನ್ವಯ, ಸಹಕಾರವನ್ನು ಸಾಧಿಸಿ ಮತ್ತು ಯಶಸ್ವಿಯಾಗಿ ಸಮೀಕ್ಷೆಯನ್ನು ಕೈಗೊಳ್ಳಲು ಕಾರ್ಯಕ್ರಮ ನಿರ್ವಹಣಾ ಸಮಿತಿ, ಮೇಲುಸ್ತುವಾರಿ ಮತ್ತು ಮೌಲ್ಯಮಾಪನ ಸಮಿತಿ, ಹಣಕಾಸು ನಿರ್ವಹಣಾ ಸಮಿತಿ, ಸಂವಹನ ಸಮಿತಿ, ತರಬೇತಿ ಸಮಿತಿ ಎಂಬ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸಮನ್ವಯತೆಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಟ್ರಾನ್ಸ್‌ಜೆಂಡರ್ಸರವರಿಗೆ ಈಗಾಗಳೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅವರಿಗೆ ಕರ್ನಾಟಕ ರಾಜ್ಯ ಮಹಿಳ ಅಭಿವೃದ್ಧಿ ನಿಗಮದಿಂದ 2012-13ನೇ ಸಾಲಿನಿಂದ ಲಿಂಗತ್ವ ಸಂಖ್ಯಾತರ ಪುನರ್ವಸತಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿ ಈವರೆಗೂ ಒಟ್ಟು 8210 ಟ್ರಾನ್ಸ್‌ಜೆಂಡರ್ಸ್ಗಳಿಗೆ ಸಾಲ ಸೌಲಭ್ಯ, ಸಹಾಯಧನ ಒದಗಿಸಲಾಗುತ್ತಿದೆ. ವಿವಿಧ ವಸತಿ ಯೋಜನೆಗಳಡಿ ಒಟ್ಟು 33 ಟ್ರಾನ್ಸ್ಜೆಂಡರ್ಸರವರಿಗೆ ವಸತಿ ಕಲ್ಪಿಸಲಾಗಿದೆ. 2022-23ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 149 ರಲ್ಲಿ 'ಲಿಂಗತ್ವ ಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುವುದು' ಎಂದು ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ 3403 ಮನೆಗಳನ್ನು ಸರ್ಕಾರದಿಂದ ಮಂಜೂರಿ ಮಾಡಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ಡಾ ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಹಾಗೂ ಇತರೆ ವರ್ಗಗಳಿಗೆ ಸೇರಿದವರಿಗೆ ದೇವರಾಜ ಅರಸು ವಸತಿ ಯೋಜನೆ ಅಡಿ ಪರಿಗಣಿಸಿಕೊಂಡು ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಮೈತ್ರಿ ಯೋಜನೆಯಡಿ ಒಟ್ಟು 2052 ಟ್ರಾನ್ಸ್‌ಜೆಂಡರ್ಸ್ಗಳಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ರೂ. 800 ಗಳನ್ನು ಒದಗಿಸಲಾಗುತ್ತಿದೆ ಎಂದರು.

ಪೋಸ್ಟರ್ ಬಿಡುಗಡೆ : ಟ್ರಾನ್ಸ್‌ಜೆಂಡರ್ಸ್ಗಳ ಬೇಸ್‌ಲೈನ್ ಸಮೀಕ್ಷೆ ಕುರಿತಂತೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಿದ್ಧಪಡಿಸಲಾದ ಪೋಸ್ಟರ್‌ಗಳನ್ನ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಸುದ್ದಿಗೊಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದೇಶಕರಾದ ಪುಷ್ಪಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪದ್ಮಾವತಿ ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಗಳಾದ ಗಂಗಪ್ಪ ಸೇರಿದಂತೆ ಕ.ರಾ.ಮ.ಅ.ನಿ ಕೊಪ್ಪಳ ಕಚೇರಿಯ ಅಭಿವೃದ್ಧಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.