ಸಿನಿಮಾ ಬಿಡುಗಡೆಯಾಗಿ 3 ತಿಂಗಳಾದ್ಮೇಲೆ ಕಾಂತಾರ ಕ್ಲೈಮ್ಯಾಕ್ಸ್ನ ಅಸಲಿ ಸತ್ಯ ಬಿಚ್ಚಿಟ್ಟ ರಿಷಭ್ ಶೆಟ್ಟಿ

ಬೆಂಗಳೂರು: ನಿಮಗೆಲ್ಲರಿಗೂ ಗೊತ್ತೇ ಇದೆ. ಕಾಂತಾರ (Kantara) ಸಿನಿಮಾ ಸೆಪ್ಟೆಂಬರ್ ಅಂತ್ಯದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ, ಅತ್ಯದ್ಭುತ ಪ್ರತಿಕ್ರಿಯೆ ಬಂದ ಬಳಿಕ ಕೇವಲ ಎರಡೇ ವಾರದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬದಲಾಯಿತು.
ಸಿನಿಮಾದಲ್ಲಿ ರಿಷಭ್ (Rishab Shetty) ಅವರ ಅಮೋಘ ಅಭಿನಯವೇ ಪ್ರಮುಖ ಆಕರ್ಷಣೆ. ಅದರಲ್ಲೂ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ನಲ್ಲಿ ರಿಷಭ್ ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ರೀತಿಯಂತೂ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಇಡೀ ಚಿತ್ರವನ್ನು ಎಲ್ಲ ಭಾಷಿಗರು ತಮ್ಮದೆಂದು ಅಪ್ಪಿ, ಒಪ್ಪಿಕೊಂಡರು. ಸಿನಿಮಾ ನೋಡಿದ ಬಳಿಕ ಸೂಪರ್ ಸ್ಟಾರ್ ರಜಿನಿಕಾಂತ್ ಸಹ ರಿಷಭ್ ನಟನೆ ಫಿದಾ ಆಗಿ, ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಚಿನ್ನದ ಸರವನ್ನು ಉಡುಗೊರೆಯಾಗಿಯು ನೀಡಿದ್ದಾರೆ. ಅಂದಹಾಗೆ ಕಾಂತಾಂರ ಸಿನಿಮಾವನ್ನು ಒಂದು ಕೋಟಿಗೂ ಅಧಿಕ ಮಂದಿ ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿರುವುದು ಹೊಸ ದಾಖಲೆಯಾಗಿದೆ. ಜನರ ಮಾತಿನ ಪ್ರಚಾರವೇ ಕಾಂತಾರದ ಪ್ರಚಂಡ ಯಶಸ್ಸಿಗೆ ಕಾರಣ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ.
ಇಡೀ ಚಿತ್ರದ ಆಕರ್ಷಣಿಯವೆಂದರೆ, ಕೊನೆಯ 20 ನಿಮಿಷದ ದೃಶ್ಯ. ಕ್ಲೈಮ್ಯಾಕ್ಸ್ನಲ್ಲಿ ರಿಷಭ್ ಅಭಿನಯ ನೋಡಿ ಮೆಚ್ಚಿಕೊಂಡವರೇ ಹೆಚ್ಚು. ಆದರೆ, ಕ್ಲೈಮ್ಯಾಕ್ಸ್ ಶೂಟಿಂಗ್ ಅಷ್ಟು ಸುಲಭವಾಗಿರಲಿಲ್ಲವಂತೆ. ಕಾಂತಾರ ಕ್ಲೈಮ್ಯಾಕ್ಸ್ನ ಅಸಲಿ ರಹಸ್ಯವನ್ನು ರಿಷಭ್ ಕೊನೆಗೂ ಬಿಚ್ಚಿಟ್ಟಿದ್ದಾರೆ.
ಸಿನಿಮಾ ರಿಲೀಸ್ ಆಗಿ ಮೂರು ತಿಂಗಳು ಕಳೆದ ಬಳಿಕ ಅಸಲಿ ಸತ್ಯವನ್ನು ರಿಷಭ್ ಬಹಿರಂಗಪಡಿಸಿದ್ದಾರೆ. ನೆಟ್ಫ್ಲಿಕ್ಸ್ ಸಂದರ್ಶನದಲ್ಲಿ ಮಾತನಾಡಿರುವ ರಿಷಭ್, ಚಿತ್ರ ಪ್ರೇಮಿಗಳನ್ನು ಹಾಗೂ ಅನೇಕ ಕಲಾವಿದರನ್ನು ಮಂತ್ರಮುಗ್ಧರನ್ನಾಗಿಸಿದ ಕ್ಲೈಮ್ಯಾಕ್ಸ್ ಹಿಂದಿನ ಅಚ್ಚರಿಯ ಕಹಾನಿಯನ್ನು ತೆರೆದಿಟ್ಟಿದ್ದಾರೆ.
20 ನಿಮಿಷದ ಕ್ಲೈಮ್ಯಾಕ್ಸ್ಗಾಗಿ ರಿಷಭ್ ತುಂಬಾ ಕಷ್ಟಪಟ್ಟಿದ್ದಾರೆ. ಉರಿಯೋ ದೊಣ್ಣೆಗಳಿಂದ ತುಂಬಾ ಏಟು ತಿಂದಿದ್ದಾರಂತೆ. ವಿಲನ್ಗಳು ಕೊಟ್ಟ ಬೆಂಕಿ ದೊಣ್ಣೆಯ ಏಟಿಗೆ ರಿಷಭ್ ಬೆನ್ನೆಲ್ಲಾ ಬೆಂದು ಹೋಗಿತ್ತು. ಬೆನ್ನಿನ ಮೇಲೆ ಬೊಬ್ಬೆಗಳು ಬಂದು ಕಿತ್ತುಕೊಂಡಿದ್ದವು. ಬೆನ್ನು ಉರಿಗೆ ಹತಾಶರಾಗಿದ್ದ ರಿಷಭ್, ಎದುರುಗಡೆ ಯಾರಾದ್ರೂ ಬಂದರೆ ಸಾಯಿಸಬೇಕು ಎನ್ನುವಷ್ಟು ಕೋಪ ಬಂದಿತ್ತಂತೆ. ಆ ಕೋಪ-ತಾಪ ತೆರೆ ಮೇಲೆ ನೈಜವಾಗಿ ಮೂಡಿಬಂದಿದೆ ಎಂದು ರಿಷಭ್ ಹೇಳಿದ್ದಾರೆ.
ಗುಳಿಗದ ಸೀಕ್ವೆನ್ಸ್ ನಲ್ಲಿ ಡಿವೈನ್ ಸ್ಟಾರ್ ಅಭಿನಯ ನೋಡುಗರನ್ನ ಮಂತ್ರಮುಗ್ದರನ್ನಾಗಿಸಿದೆ. ಅಂದಹಾಗೆ ಅದೊಂದು ಸೀನ್ಗಾಗಿ ರಿಷಭ್ ಕಷ್ಟ ಪಡಬೇಕಾಗಿರಲಿಲ್ಲ. ವಿಎಫೆಕ್ಸ್ ಯೂಸ್ ಮಾಡಬಹುದಿತ್ತು. ಬಾಡಿ ಡಬಲ್ ಮಾಡಿಸಬಹುದಿತ್ತು. ಆದರೆ, ಕಾಂತಾರ ಪ್ರತಿ ದೃಶ್ಯವೂ ನೈಜವಾಗಿರಬೇಕು ಅನ್ನೋ ಕಾರಣಕ್ಕೆ ರಿಷಭ್ ಈ ರಿಸ್ಕ್ ತಗೊಂಡಿದ್ದಾರಂತೆ. ನೋವುಂಡು ಶ್ರದ್ಧಾಭಕ್ತಿಯಿಂದ ಕೆಲಸ ಮಾಡಿದರಂತೆ. ರಿಷಭ್ ಭಕ್ತಿ ಭಾವಕ್ಕೆ ಪ್ರತಿಫಲ ಸಿಕ್ಕಿದ್ದು, ಡಿವೈನ್ ಸ್ಟಾರ್ ಪಟ್ಟ ಲಭಿಸಿದೆ. (ದಿಗ್ವಿಜಯ ನ್ಯೂಸ್)