ರಾಹುಲ್ ಹೆಗಲ ಮೇಲೆ ಕೈಹಾಕಿದ ಡಿಕೆಶಿ: ಫೋಟೊ ಹಂಚಿಕೊಂಡು ಸ್ವಾಗತ ಕೋರಿದ ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು, ಮಾರ್ಚ್ 20: ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ಮೇ ತಿಂಗಳಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ( Belagavi ) ನಡೆಯಲಿರುವ 'ಯುವಕ್ರಾಂತಿ ಸಮಾವೇಶ'ದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ( Congress) ನಾಯಕ ರಾಹುಲ್ ಗಾಂಧಿ ( Rahul Gandhi ) ಸೋಮವಾರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಮೇ ವೇಳೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಆರಂಭಿಸಲಿದ್ದಾರೆ. ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ಭಾನುವಾರ ತಿಳಿಸಿದೆ.
ರಾಹುಲ್ ಗಾಂಧಿ ಅವರು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಕಾರ್ಯಕ್ರಮದ ನಂತರ ಅವರು ದೆಹಲಿಗೆ ಹಿಂತಿರುಗುತ್ತಾರೆ ಎಂದು ತಿಳಿದುಬಂದಿದೆ.
ಇಂದು ( ಸೋಮವಾರ ) ಬೆಳಗಾವಿಯಲ್ಲಿ ಮಧ್ಯಾಹ್ನ ನಡೆಯಲಿರುವ ನಡೆಯುವ 'ಯುವಕ್ರಾಂತಿ ಸಮಾವೇಶ'ದಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಳಗಾವಿಯಲ್ಲಿ ನಡೆಯುವ 'ಯುವಕ್ರಾಂತಿ ಸಮಾವೇಶ'ದಲ್ಲಿ ಭಾಗವಹಿಸಲಿದ್ದಾರೆ. ಡಿಕೆ ಶಿವಕುಮಾರ್ ಮಂಗಳವಾರ ಕುಣಿಗಲ್‌ಗೆ ತೆರಳಲಿದ್ದು, ಅಲ್ಲಿ 'ಪ್ರಜಾಧ್ವನಿ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಮೂರು ಚುನಾವಣಾ 'ಖಾತರಿ'ಗಳನ್ನು ಘೋಷಿಸಿದೆ. ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ), ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2,000 ರೂ (ಗೃಹ ಲಕ್ಷ್ಮಿ) ಮತ್ತು ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ (ಅನ್ನ ಭಾಗ್ಯ) ನೀಡಲು ಕಾಂಗ್ರೆಸ್ ಮುಂದಾಗಿದೆ.
ರಾಹುಲ್ ಸ್ವಾಗತಿಸಿ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಕನ್ನಡಿಗರು ಭರವಸೆಯ ಆಸೆಕಂಗಳಿಂದ ಎದುರು ನೋಡುತ್ತಿರುವ ನಾಯಕ ಶ್ರೀ ರಾಹುಲ್ ಗಾಂಧಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ರಾಜ್ಯದ ಅಭಿವೃದ್ಧಿಯ ಮಹಾಪಥದ ಚಾಲಕಶಕ್ತಿಗೆ ಕನ್ನಡಿಗರೆಲ್ಲರ ಪರವಾಗಿ ಹಾರ್ದಿಕ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಭಾರತ್ ಜೋಡೊ ಯಾತ್ರೆ ವೇಳೆ, ರಾಹುಲ್ ಅವರ ಹೆಗಲಿ ಮೇಲೆ ಕೈ ಹಾಕಿ ತೆಗೆಸಿಕೊಂಡ ಫೋಟೊವನ್ನು ಡಿಕೆಶಿ ಹಂಚಿಕೊಂಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ, 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸುಮಾರು 140 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಪಕ್ಷದ ಮುಖಂಡರು ಹೇಳಿಕೊಂಡಿದ್ದಾರೆ.
ಲೋಕ್ ಪೋಲ್ ಸಂಸ್ಥೆ ನಡೆಸಿರುವ ಸರ್ವೇ ಪ್ರಕಾರ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್‌ಗೆ 116 ರಿಂದ 122 ಸ್ಥಾನಗಳು ಬರಲಿದ್ದು. ಆಡಳಿತಾರೂಢ ಬಿಜೆಪಿ 77 ರಿಂದ 83 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೆಡಿಎಸ್ 21 ರಿಂದ 27 ಸ್ಥಾನಗಳನ್ನು ಮಾತ್ರ ತನ್ನದಾಗಿಸಿಕೊಳ್ಳಲಿದೆ. ಪಕ್ಷದ ಆಂತರಿಕ ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.
ಈ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಬರಲಿವೆ. ಬಿಜೆಪಿ 40 ರಿಂದ 50 ಸ್ಥಾನಗಳಿಗೆ ಕುಸಿದರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದ್ದಾರೆ. ಇದೇ ಮಾತನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ ಬಿ ಪಾಟೀಲ್ ಅವರೂ ಹೇಳಿದ್ದಾರೆ. ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ.