ಮೈಸೂರು-ಬೆಂಗಳೂರು ವಂದೇ ಭಾರತ್ ಟ್ರೈನ್ ವೇಗ ಹೆಚ್ಚಳ ಶೀಘ್ರ

ಮೈಸೂರು-ಬೆಂಗಳೂರು ವಂದೇ ಭಾರತ್ ಟ್ರೈನ್ ವೇಗ ಹೆಚ್ಚಳ ಶೀಘ್ರ

ಬೆಂಗಳೂರು, ಜನವರಿ 06: ಮೈಸೂರು- ಬೆಂಗಳೂರು ಮಾರ್ಗದಲ್ಲಿ ಓಡಾಡಲಿರುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿನ ವೇಗ ಇನ್ನಷ್ಟು ಹೆಚ್ಚಾಗಲಿದೆ. ಪ್ರಸ್ತುತ ಈ ಮಾರ್ಗದ ರೈಲಿನ ವೇಗವನ್ನು ಗಂಟೆಗೆ 110 ಕಿಲೋ ಮೀಟರ್‌ನಿಂದ 130 ಕಿಲೋ ಮೀಟರ್‌ಗೆ ಹೆಚ್ಚಿಸಲಾಗುವುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ನೈಋತ್ಯ ರೈಲ್ವೆ ವಿಭಾಗವು ಬೆಂಗಳೂರಿನಿಂದ ಮೈಸೂರುವರೆಗೆ ಮಾಧ್ಯಮ ಪ್ರತಿನಿಧಿಗಳಿಗಾಗಿ ವಂದೇ ಭಾರತ್ ಟ್ರಿಪ್ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಅಧಿಕಾರಿಗಳು ಪ್ರಸ್ತುತದಲ್ಲಿ ಈ ರೈಲು ಪ್ರತಿ ಗಂಟೆಗೆ 77 ರಿಂದ 78 ಕಿಲೋ ಮೀಟರ್‌ ವೇಗದಲ್ಲಿ ಓಡಾಡುತ್ತಿದೆ. ಇದು ದೇಶದ ಏಳು ನಿಧಾನಗತಿಯ ವಂದೆ ಭಾರತ್‌ ರೈಲಿನ ಪೈಕಿ ಮೂರನೇ ನಿಧಾನಗತಿಯಾಗಿದೆ.

ಈ ಕಾರಣದಿಂದ ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಗರಿಷ್ಠ ಅನುಮತಿಸುವ ವೇಗವನ್ನು ಗಂಟೆಗೆ 110 ಕಿಲೋ ಮೀಟರ್‌ನಿಂದ 130 ಕಿಮೀಗೆ ಹೆಚ್ಚಿಸಲಿದ್ದೇವೆ ಎಂದು ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ (ಬೆಂಗಳೂರು ವಿಭಾಗ) ಕುಸುಮಾ ಹರಿಪ್ರಸಾದ್ ಹೇಳಿದರು.

ನಮ್ಮ ಎಂಜಿನಿಯರ್‌ಗಳು ಬೆಂಗಳೂರು ಮತ್ತು ಮೈಸೂರು ನಡುವೆ ಗರಿಷ್ಠ ಅನುಮತಿಸುವ ವೇಗವನ್ನು ಹೆಚ್ಚಿಸಲು ಕಾರ್ಯ ಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲಾಗಿದೆ. ವರದಿಯ ಆಧಾರದ ಮೇಲೆ ವೇಗವನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಜೊತೆಗೆ ಬೆಂಗಳೂರು ಮತ್ತು ಜೋಲಾರ್‌ಪೇಟೆ ನಡುವಿನ ಗರಿಷ್ಠ ವೇಗವನ್ನು ಗಂಟೆಗೆ 110 ಕಿಲೋ ಮೀಟರ್‌ನಿಂದ 130 ಕಿಲೋ ಮೀಟರ್ ಹೆಚ್ಚಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಸೆಪ್ಟೆಂಬರ್‌ನೊಳಗೆ ಟ್ರ್ಯಾಕ್-ಅಪ್‌ಗ್ರೇಡೇಶನ್ ಕೆಲಸ ಪೂರ್ಣಗೊಂಡರೆ, ಪ್ರಯಾಣದ ಸಮಯ ಕನಿಷ್ಠ 7ರಿಂದ 10 ನಿಮಿಷಗಳಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ವಂದೇ ಭಾರತ ರೈಲಿನತ್ತ ಪ್ರಯಾಣಿಕರ ಒಲವು

ಕಳೆದ ನವೆಂಬರ್ 11 ರಂದು ಬೆಂಗಳೂರಿನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಪ್ರಾರಂಭಿಸಿತು. ಇದಕ್ಕೆ ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ರೈಲಿನಲ್ಲಿ ಒದಗಿಸಲಾಗಿ ವಿಶೇಷತೆಗಳತ್ತ ಆಕರ್ಷಿತರಾದ ಪ್ರಯಾಣಿಕರು ಸಾಮಾನ್ಯ ರೈಲುಗಳಿಂದ ವಂದೇ ಭಾರತ್ ರೈಲಿನತ್ತ ಹೆಚ್ಚು ಒಲವು ತೋರುತ್ತಿದ್ದಾರೆ ಎಂದರು.

ಮೈಸೂರು - ಬೆಂಗಳೂರು - ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನ ಸರಾಸರಿ ವೇಗ ಪ್ರತಿ ಗಂಟೆಗೆ 68 ರಿಂದ 71 ಕಿಲೋ ಮೀಟರ್ ಇದೆ. ಮೈಸೂರು -ಬೆಂಗಳೂರು- ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್ ಎರಡೂ ಬುಧವಾರದಂದು ಕಾರ್ಯ ನಿರ್ವಹಿಸುತ್ತಿಲ್ಲ. ಈ ಕಾರಣಕ್ಕೆ ಬುಧವಾರ ಯಾವುದಾದರೂ ಒಂದು ರೈಲು ಓಡಿಸುವಂತೆ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು-ಮೈಸೂರು ವಿಭಾಗದಲ್ಲಿ ಹಲವು ವಕ್ರಾಕೃತಿ ರೈಲು ಸೇವೆಗಳನ್ನು ನಿಧಾನಗೊಳಿಸಲಾಗುವುದು. ಈ ವರ್ಷವೇ ಟ್ರ್ಯಾಕ್-ಅಪ್‌ಗ್ರೇಡೆಶನ್ ಕೆಲಸವನ್ನು ಪ್ರಾರಂಭಿಸುತ್ತೇವೆ. ಹಳಿ ವಿಚಾರದಲ್ಲಿ ವಕ್ರಾಕೃತಿಗಳನ್ನು ಸರಳಗೊಳಿಸಲಾಗುವುದು ಎಂದು ಅವರು ತಿಳಿಸಿದರು.