ಮಾ.12ರಂದು ಪ್ರಧಾನಿ ಮೋದಿ ಬೆಂಗಳೂರು- ಮೈಸೂರು ಹೈವೇ ಉದ್ಘಾಟನೆ: ಎಸ್ಪಿಜಿ ಅನುಮತಿ ರೋಡ್ ಶೋ: ಪ್ರತಾಪ್ ಸಿಂಹ

ಮೈಸೂರು: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ವೇಳೆ ಎಸ್ಪಿಜಿ ಅನುಮತಿ ಕೊಟ್ಟರೆ ಹೈವೇಯಲ್ಲಿ ರೋಡ್ ಶೋ ಏರ್ಪಡಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಂದು ಸುಮಾರು 2 ಕಿ ಮೀ ವರೆಗೆ ರೋಡ್ ಶೋ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ನಂತರ ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದೇವೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೇ ನಿರ್ಮಾಣ ಮಾಡಲಾಗಿದೆ. ಎಕ್ಸ್ಪ್ರೆಸ್ವೇಗೆ ಕಾವೇರಿ ಎಕ್ಸ್ಪ್ರೆಸ್ವೇ ಎಂದು ಹೆಸರಿಸುವಂತೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವಿಚಾರವಾಗಿ ಮಾತನಾಡಿ, ಮಾರ್ಚ್ 14ರವರೆಗೆ ಟೋಲ್ ಸಂಗ್ರಹವನ್ನು ಮುಂದೆ ಹಾಕಿದ್ದೇವೆ. ಬೆಂಗಳೂರು-ನಿಡಘಟ್ಟವರೆಗೂ ಟೋಲ್ ಸಂಗ್ರಹ ಮಾಡಲಾಗುತ್ತದೆ. ಸರ್ವಿಸ್ ರಸ್ತೆ ಪೂರ್ಣಗೊಳ್ಳಲು ಜಮೀನು ಕುರಿತ ಕೇಸ್ ಬಾಕಿ ಇದೆ. ಕೋರ್ಟ್ನಲ್ಲಿ ತೀರ್ಮಾನವಾದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.