ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್ : ರಾಷ್ಟ್ರೀಯ ಯುವ ಸ್ವಯಂ ಸೇವಕರ ತರಬೇತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು : ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ದೇಶದಾದ್ಯಂತ 'ರಾಷ್ರ್ಟೀಯ ಯುವ ಸ್ವಯಂ ಸೇವಕರ' (NATIONAL YOUTH VOLUNTEER) ಎಂಬ ಯೋಜನೆಯನ್ನು ನೆಹರು ಯುವ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ತಾಲ್ಲೂಕುವಾರು ಯುವಕರನ್ನು ನೇಮಕ ಮಾಡಿಕೊಂಡು, ಅವರಿಗೆ ತರಬೇತಿ ನೀಡುವ ಮೂಲಕ ಅವರು ಗ್ರಾಮೀಣ ಪ್ರದೇಶದ ಯುವಜನರನ್ನು ಯುವಕ/ಯುವತಿ/ಮಹಿಳಾ ಮಂಡಳಿಗಳನ್ನು ಸಂಘಟಿಸುವ ಹಾಗೂ ಅವರನ್ನು ಸಮಾಜಮುಖಿಗಳನ್ನಾಗಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.
ತರಬೇತಿಗಾಗಿ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯವರಿಗೆ ಆಧ್ಯತೆಯಿದೆ. ಅಭ್ಯರ್ಥಿಗಳು 18-29 (01-04-2023) ಕ್ಕೆ ವಯೋಮಿತಿಯವರಾಗಿರಬೇಕು. ಅಭ್ಯರ್ಥಿಗಳು ಕಡ್ಡಾಯವಾಗಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ನಿವಾಸಿಗಳಾಗಿರಬೇಕು. ಅರ್ಜಿ ಹಾಕಬಯಸುವವರು ಯಾವುದೇ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಾಗಿರಬಾರದು ಹಾಗೂ ಬೇರೆ ಯಾವುದೇ ಸಂಘ/ಸಂಸ್ಥೆ ಅಥವಾ ಇಲಾಖೆಯಲ್ಲಿ ಪೂರ್ಣ ಅಥವಾ ಅರೆಕಾಲಿಕ ಹುದ್ದೆಯಲ್ಲಿ ತೊಡಗಿಸಿಕೊಂಡಿರಬಾರದು. ಯೋಜನೆಯ ಅವಧಿಯು 2 ವರ್ಷಗಳದ್ದಾಗಿದ್ದು, ಮೊದಲ ವರ್ಷದಲ್ಲಿ ಅವರ ಕೆಲಸ-ಕಾರ್ಯಗಳು ತೃಪ್ತಿಕರವಾಗಿದ್ದಲ್ಲಿ ಮಾತ್ರ ಅವರ ಸೇವೆಯನ್ನು ಎರಡನೆಯ ವರ್ಷಕ್ಕೆ ವಿಸ್ತರಿಸಲಾಗುವುದು. ಆಯ್ಕೆಯಾದವರು ತರಬೇತಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆಯಲ್ಲದೆ, ತರಬೇತಿ ನಂತರ ಗ್ರಾಮಗಳಿಗೆ ತೆರಳಿ ಯುವ ಸಂಘಟನಾ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನ ಮತ್ತು ಪ್ರವಾಸ ಭತ್ಯೆಯೆಂದು ಮಾಹೆಯಾನ ರೂ. 5,000/- (ಐದು ಸಾವಿರ ರೂ.ಗಳು ಮಾತ್ರ) ಅನ್ನು ಮಾತ್ರ ನೀಡಲಾಗುವುದು. ಅರ್ಜಿ ಹಾಕಬಯಸುವವರು www.nyks.nic.in ವೆಬ್ಸೈಟ್ ಮುಖಾಂತರವೇ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಅರ್ಹ ಮತ್ತು ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯನ್ನು. 2023ರ ಮಾರ್ಚ್ 09 ರಂದು ಸಂಜೆ 5.00 ಗಂಟೆಯ ಒಳಗಾಗಿ ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಕೈಗಾರಿಕಾ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ ಬೆಂಗಳೂರು-560044 ಇವರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನೆಹರು ಯುವ ಕೇಂದ್ರ ಕಛೇರಿಯ ದೂರವಾಣಿ ಸಂಖ್ಯೆ: 080-23209157 ಅನ್ನು ಸಂಪರ್ಕಿಸಿಬಹುದಾಗಿದೆ ಎಂದು ನೆಹರು ಯುವ ಕೇಂದ್ರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಅಧಿಕಾರಿ ಕೆ.ಶ್ರೀವಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.