ನೇಣುಗಂಬದ ಬದಲು ಪರ್ಯಾಯ ಏನಿದೆ?; ಅಧ್ಯಯನ ನಡೆಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ನೇಣುಗಂಬದ ಬದಲು ಪರ್ಯಾಯ ಏನಿದೆ?; ಅಧ್ಯಯನ ನಡೆಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

ವದೆಹಲಿ: ಮರಣದಂಡನೆ ಗುರಿಯಾದವರನ್ನು ನೇಣಿಗೇರಿಸುವ ಬದಲು, ಕಡಿಮೆ ಯಾತನೆ ನೀಡುವಂತಹ ವಿಧಾನದ ಮೂಲಕ ಈ ಶಿಕ್ಷೆಯನ್ನು ಜಾರಿ ಮಾಡಲು ಪರ್ಯಾಯ ಮಾರ್ಗವಿದೆಯೇ? ಈ ಬಗ್ಗೆ ನಿಮ್ಮಲ್ಲಿ ಏನಾದರೂ ಅಧ್ಯಯನಗಳಿವೆಯೇ ಎಂದು ಸುಪ್ರೀಂಕೋರ್ಟ್ ಸರ್ಕಾರವನ್ನು ಕೇಳಿದೆ.ಗಲ್ಲುಗಂಬಕ್ಕೇರಿಸುವುದ ಕ್ಕಿಂತ ಪರ್ಯಾಯ ಕ್ರಮಗಳ ಮೂಲಕ ಕಡಿಮೆ ಯಾತನೆ ನೀಡುವಂತಹ ಸಾವಿಗೆ ಮರಣದಂಡನೆಯ ಅಪರಾಧಿ ತುತ್ತಾಗಬೇಕು ಎನ್ನುವುದು ಹಲವರ ಕಾಳಜಿ. ಹೀಗಾಗಿ, ಈ ಕುರಿತ ಪರಿಶೀಲನೆ ಬಗ್ಗೆ ಚರ್ಚೆ ಪ್ರಾರಂಭಿಸಬಹುದು ಮತ್ತು ಸೂಕ್ತ ಮಾಹಿತಿ ಸಂಗ್ರಹಿಸಿ ತಿಳಿಸುವಂತೆ ಅಟಾರ್ನಿ ಜನರಲ್ ಆರ್. ವೆಂಕಟರಮಣಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿತು. ಈ ವಿಚಾರ ಪರಿಗಣಿಸುವ ಸಂಬಂಧ ತಜ್ಞರ ಸಮಿತಿ ರಚನೆ ಮಾಡಲು ನ್ಯಾಯಾಲಯ ಮುಕ್ತವಾಗಿದೆ ಎಂದೂ ತಿಳಿಸಿ, ಮುಂದಿನ ವಿಚಾರಣೆ ಮೇ 2ಕ್ಕೆ ನಿಗದಿ ಮಾಡಿದ್ದಾರೆ.

ಮರಣದಂಡನೆಗೆ ಗುರಿಯಾದ ಅಪರಾಧಿ ಕಡಿಮೆ ನೋವಿನಿಂದ ಅಂತ್ಯ ಕಾಣಬೇಕು. ನೇಣು ಹಾಕುವ ಬದಲು ಗುಂಡು ಹಾರಿಸುವುದು, ಮಾರಣಾಂತಿಕ ಇಂಜೆಕ್ಷನ್ ಅಥವಾ ವಿದ್ಯುತ್ ಕುರ್ಚಿಯ ಬಳಕೆ ಬಗ್ಗೆ ಚಿಂತನೆ ನಡೆಸಬಹುದು. ನೇಣುಗಂಬಕ್ಕೇರಿಸುವ ಪ್ರಕ್ರಿಯೆಯಂತೂ ಸಂಪೂರ್ಣವಾಗಿ ಕ್ರೂರ ಎಂದು ವಕೀಲ ರಿಷಿ ಮಲ್ಹೋತ್ರಾ ಕಾನೂನು ಆಯೋಗದ ವರದಿಯಲ್ಲಿ ದಾಖಲಾಗಿರುವುದನ್ನು ನ್ಯಾಯಪೀಠದ ಮುಂದಿಟ್ಟರು.

ನೋಟು ಅಮಾನ್ಯ ಅರ್ಜಿಗೆ ನಕಾರ: ಅಮಾನ್ಯಗೊಂಡ 1,000 ಮತ್ತು 500 ರೂ. ಮುಖಬೆಲೆಯ ನೋಟು ಬಗ್ಗೆ ವೈಯಕ್ತಿಕವಾಗಿ ಸಲ್ಲಿಸಲಾಗರುವ ಪ್ರಕರಣಗಳನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. 12 ವಾರಗಳ ಅವಧಿಯೊಳಗಾಗಿ ಕುಂದುಕೊರತೆಗಳನ್ನು ಸಂಬಂಧಪಟ್ಟವರು ತಿಳಿಸಿದರೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಸರ್ಕಾರದ ಕ್ರಮದ ಬಗ್ಗೆ ಅರ್ಜಿದಾರರು ತೃಪ್ತರಾಗದಿದ್ದರೆ, ಅವರು ಸಂಬಂಧಿಸಿದ ಉಚ್ಚ ನ್ಯಾಯಾಲಯವನ್ನು ಸಂರ್ಪಸಲು ಸ್ವತಂತ್ರರು ಎಂದೂ ಸ್ಪಷ್ಟಪಡಿಸಿದೆ.

ಮರಣದಂಡನೆ ರದ್ದು: ಏಳು ವಷದ ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ ಅಪರಾಧಿಗೆ ತಮಿಳುನಾಡಿನ ಕೋರ್ಟ್ 2013ರಲ್ಲಿ ವಿಧಿಸಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿ, ಶಿಕ್ಷೆಯನ್ನು 20 ವರ್ಷ ಜೀವಾವಧಿ ಸಜೆಯಾಗಿ ಪರಿವರ್ತಿಸಿದೆ. ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿರುವ ಬಗ್ಗೆ ಯಾವುದೇ ಶಂಕೆ ಇಲ್ಲ. ಆದರೆ, ಇದಕ್ಕೆ ಗರಿಷ್ಠ ಶಿಕ್ಷೆ ವಿಧಿಸಿದ್ದು ಸಮಂಜಸವೆಂದು ತೋರುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.