ಕಲಬುರಗಿ: ರೈತ ಮಹಿಳೆಯ ಬರ್ಬರ ಕೊಲೆ; ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಶಂಕೆ

ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಹರನಾಳ ಬಿ ಗ್ರಾಮದ ನಲವತ್ತೈದು ವರ್ಷದ ಅನಸೂಯಾ ಎನ್ನುವ ಮಹಿಳೆಯ ಬರ್ಬರಯಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಅನಸೂಯಾ, ಪ್ರತಿ ದಿನ ತನ್ನ ಸಹೋದರಿ ಜೊತೆಗೆ ಸೇರಿಕೊಂಡು ಕೃಷಿ ಜಮೀನಿಗೆ ಹೋಗುತ್ತಿದ್ದಳು. ಜಮೀನಿನಲ್ಲಿ ಕೆಲಸ ಮುಗಿಸಿ, ನಂತರ ಸಂಜೆ ಮನೆಗೆ ಬರುತ್ತಿದ್ದಳು. ಪ್ರತಿದಿನ ಸಹೋದರಿ ಜೊತೆಗೆ ಹೊಲಕ್ಕೆ ಹೋಗಿ ಬರುತ್ತಿದ್ದ ಅನಸೂಯಾ, ನಿನ್ನೆ(ಮಾ.19) ಸಹೋದರಿ ಮನೆಯಲ್ಲಿದ್ದು ತಾಯಿಯ ಆರೈಕೆ ಕೆಲಸ ಮಾಡಿದ್ರೆ, ಇತ್ತ ಅನಸೂಯಾ ಮುಂಜಾನೆ 10 ಗಂಟೆಗೆ ಜಮೀನಿಗೆ ಹೋಗಿದ್ದಳು. ಆದರೆ ಎಂದಿನಂತೆ ಸಂಜೆ ಆರು ಗಂಟೆಗೆ ಬರಬೇಕಾದ ಅನಸೂಯ, ಸಮಯ ಆದರೂ ಮರಳಿ ಮನೆಗೆ ಬಾರದ ಇದ್ದಾಗ ಕುಟುಂಬದವರು ಆತಂಕಗೊಂಡಿದ್ದಾರೆ. ಅನಸೂಯಾಳ ಸಹೋದರಿಯ ಪುತ್ರ ಜಮೀನಿಗೆ ಹೋಗಿ ನೋಡಿದಾಗ ಅನಸೂಯ ಮಲಗಿದ ಸ್ಥಿತಿಯಲ್ಲಿದ್ದಿದ್ದನ್ನು ನೋಡಿ, ಆಕೆ ಮಲಗಿರಬಹುದು ಎಂದು ಎಬ್ಬಿಸಲು ಹೋದಾಗ ಗೊತ್ತಾಗಿದೆ ಅನಸೂಯಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿ ಬರ್ಬರವಾಗಿ ಕೊಲೆ ಮಾಡಿದ್ದಾನೆಂದು.
ಅನಸೂಯಾ ಇಪ್ಪತ್ತು ವರ್ಷದ ಹಿಂದೆ ವಿಜಯಪುರ ಮೂಲದ ವ್ಯಕ್ತಿ ಜೊತೆ ವಿವಾಹವಾಗಿತ್ತು. ಆದರೆ ಕೌಟುಂಬಿಕ ಕಲಹದಿಂದ ಅನಸೂಯಾ ಅನೇಕ ವರ್ಷಗಳ ಹಿಂದೆಯೇ ಗಂಡನ ಮನೆ ಬಿಟ್ಟು ಬಂದು ತಾಯಿಯ ತವರು ಮನೆಯಲ್ಲಿಯೇ ಇದ್ದಳು. ಮಕ್ಕಳು ಕೂಡ ಇಲ್ಲ. ಹೀಗಾಗಿ ತಾಯಿ, ಸಹೋದರ, ಸಹೋದರಿಯರ ಜೊತೆಗೆ ವಾಸವಾಗಿದ್ದಳು. ಪ್ರತಿನಿತ್ಯ ಮುಂಜಾನೆ ಜಮೀನಿಗೆ ಹೋಗಿ ಕೃಷಿ ಕೆಲಸ ಮಾಡಿ ಬರ್ತಿದ್ದಳು. ಆದರೆ ನಿನ್ನೆ(ಮಾ.19) ಬರ್ಬರವಾಗಿ ಕೊಲೆಯಾಗಿದ್ದಾಳೆ.
ಇನ್ನು ಅನಸೂಯಾಳ ಮೇಲಿದ್ದ ಬಟ್ಟೆಗಳು ಅಸ್ಥವ್ಯಸ್ಥವಾಗಿದ್ದರಿಂದ ಮತ್ತು ಆಕೆಯ ಕಿವಿಯಲ್ಲಿದ್ದ ಓಲೆಯೊಂದು ಕೂಡ ಇರದೇ ಇರೋದರಿಂದ ಯಾರಾದರು ಅತ್ಯಾಚಾರ ಮಾಡಿ ಕೊಲೆ ಮಾಡಿದ್ರಾ ಅಥವಾ ಚಿನ್ನಾಭರಣಕ್ಕಾಗಿ ಕೊಲೆ ಮಾಡಿದ್ದಾರಾ ಎನ್ನುವ ಅನುಮಾನ ಮೂಡಿದೆ. ಯಾಕಂದರೆ ಗ್ರಾಮದಲ್ಲಿ ಯಾರ ಜೊತೆ ಕೂಡ ಅನಸೂಯಾ ಮತ್ತು ಅವರ ಕುಟುಂಬದವರು ವೈಷಮ್ಯವನ್ನು ಹೊಂದಿರಲಿಲ್ಲವಂತೆ. ಯಾರ ಜೊತೆ ಜಗಳವೂ ಆಗಿರಲಿಲ್ಲ. ಆದರೆ ಬರ್ಬರವಾಗಿ ಕೊಲೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದಡೆ ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆಗೆ ನಿಖರವಾದ ಕಾರಣ, ಕೊಲೆ ಮಾಡಿದವರು ಯಾರು ಎನ್ನುವುದರ ಬಗ್ಗೆ ತನಿಖೆ ಕೂಡ ನಡೆಸುತ್ತಿದ್ದಾರೆ. ಇದರ ಜೊತೆಗೆ ಅನಸೂಯಾಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆಯಾ ಎನ್ನುವ ಬಗ್ಗೆ ಮರಣೋತ್ತರ ವರದಿಗಾಗಿ ಕಾಯುತ್ತಿದ್ದಾರೆ. ಆದರೆ ಕೃಷಿ ಜಮೀನಿಗೆ ಹೋದಾಗ ಮಹಿಳೆಯ ಬರ್ಬರ ಕೊಲೆಯಾಗಿರುವುದು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಆತಂಕ ಸೃಷ್ಟಿಮಾಡಿದೆ. ಹೀಗಾಗಿ ಪೊಲೀಸರು ಆರೋಪಿಗಳ ಬಂಧಿಸುವ ಕೆಲಸ ಮಾಡುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಕೂಡ ಮಾಡಬೇಕಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ