"ನನ್ನ ಗೆಳೆಯನಿಗೆ ಮಹೇಶ್ ಬಾಬು ಬಿಟ್ರೆ ಪ್ರಭಾಸ್ ಯಾರು ಅಂತಾನೇ ಗೊತ್ತಿರಲಿಲ್ಲ" - ರಾಣಾ ದಗ್ಗುಬಾಟಿ

"ನನ್ನ ಗೆಳೆಯನಿಗೆ ಮಹೇಶ್ ಬಾಬು ಬಿಟ್ರೆ ಪ್ರಭಾಸ್ ಯಾರು ಅಂತಾನೇ ಗೊತ್ತಿರಲಿಲ್ಲ" - ರಾಣಾ ದಗ್ಗುಬಾಟಿ

ರಾಣಾ ದಗ್ಗುಬಾಟಿ ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಲ್ಲಿದ್ದಾರೆ. ರಾಣಾ ದಗ್ಗುಬಾಟಿ ಹಾಗೂ ವಿಕ್ಟರಿ ವೆಂಕಟೇಶ್ ಇಬ್ಬರೂ ಜೋಡಿಯಾಗಿ ಒಂದೇ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ ನೆಟ್‌ಫ್ಲಿಕ್ಸ್ ಸಿರೀಸ್ 'ರಾಣಾ ನಾಯ್ಡು'. ನೆಟ್‌ಫ್ಲಿಕ್ಸ್ ನಿರ್ಮಿಸುತ್ತಿರುವ ಈ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ವೆಬ್ ಸಿರೀಸ್ ಆಗಿದ್ದು, ಕರಣ್‌ ಅನ್‌ಶುಮನ್ ಹಾಗೂ ಸುಪರ್ಣ್ ವರ್ಮಾ ನಿರ್ದೇಶನ ಮಾಡಿದ್ದಾರೆ.

ಈ ವೆಬ್ ಸಿರೀಸ್‌ನಲ್ಲಿ ರಾಣಾ ದಗ್ಗುಬಾಟಿ ಸೆಲೆಬ್ರೆಟಿಗಳ ಸಮಸ್ಯೆಗಳಿಗೆ ತನ್ನದೇ ಶೈಲಿಯಲ್ಲಿ ಪರಿಹಾರ ಕೊಡುವ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುವ ಕಥೆ ಮುಂಬೈಗೆ ಶಿಫ್ಟ್ ಆಗುತ್ತೆ. ಅಲ್ಲಿಂದ ರಾಣಾ ಹಾಗೂ ವಿಕ್ಟರಿ ವೆಂಕಟೇಶ್ ನಡುವೆ ಸ್ಟೋರಿ ಸಾಗುತ್ತೆ. ಸದ್ಯ ರಾಣಾ ದಗ್ಗುಬಾಟಿ ಈ ವೆಬ್‌ ಸಿರೀಸ್‌ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪ್ರಭಾಸ್ ಯಾರು ಅಂತಾನೇ ಬಾಲಿವುಡ್ ಸ್ನೇಹಿತರಿಗೆ ಗೊತ್ತೇ ಇರಲಿಲ್ಲ ಎಂದು ರಿವೀಲ್ ಮಾಡಿದ್ದಾರೆ.

ಭಾಷೆ ಆಧಾರದ ಮೇಲೆ ವಿಭಜನೆ ಮಾಡಲಾಗಿದೆ

ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ರಾಣಾ ದಗ್ಗುಬಾಟಿ ಹಿಂದಿ ಮಾತನಾಡುವ ಜನರಿಗೆ ತೆಲುಗು ಸಿನಿಮಾಗಳು ಇಷ್ಟ ಆಗಿದ್ದೇಗೆ? ಇಷ್ಟು ದೊಡ್ಡ ಬದಲಾವಣೆ ಆಗುತ್ತಾ? ಅನ್ನೋ ನಂಬಿಕೆ ಇತ್ತಾ? ಅನ್ನೋದನ್ನು ಬಿಡಿಸಿ ಇಟ್ಟಿದ್ದಾರೆ. " ಇಂತಹದ್ದೊಂದು ಬದಲಾವಣೆ ಆಗುತ್ತೆ ಅನ್ನೋ ನಂಬಿಕೆ ಇತ್ತು. ನನ್ನ ಎರಡನೇ ಪ್ರಾಜೆಕ್ಟ್ ಹಿಂದಿ ಸಿನಿಮಾ ಆಗಿತ್ತು. ಆ ಬಳಿಕವೂ ನಾನು ತೆಲುಗು ಸಿನಿಮಾಗಳಲ್ಲಿ ನಟಿಸಿದೆ. ಆಗಲೂ ನನಗೆ ಬಾಲಿವುಡ್ ಮಂದಿಯೊಂದಿಗೆ ಸಾಕಷ್ಟು ಸಾಮ್ಯತೆ ಇದೆ ಅಂತ ಅನಿಸಿತ್ತು. ಅಲ್ಲದೆ ಭಾವನೆಗಳನ್ನು ಹೆಣೆಯುವ ರೀತಿ ಸೇಮ್ ಇದೆ ಎಂದೆನಿಸಿತ್ತು. ನಮ್ಮನ್ನು ಸುಮ್ಮನೆ ಭಾಷೆಯ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ಇದೆಲ್ಲವೂ ಮಾಯಾ ಆಗುತ್ತೆ ಅನ್ನೋದು ಗೊತ್ತಿದೆ" ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

ಹಾಗೇ ಘಾಜಿ ಸಿನಿಮಾ ಮಾಡುವಾಗ ದೊಡ್ಡ ಗೊಂದಲವಿತ್ತು. ಕೆಲವರು ಹಿಂದಿ ಸಿನಿಮಾ ಮಾಡುತ್ತಿದ್ದಾರೆ ಎಂದೆನಿಸಿತ್ತು. ಅದೇ ಮತ್ತೊಬ್ಬರಿಗೆ ತಮಿಳು ಸಿನಿಮಾ ಮಾಡುತ್ತಿದ್ದಾರೆ ಎನಿಸಿತ್ತು ಎಂದಿದ್ದಾರೆ. " ಬಾಹುಬಲಿ ಸಿನಿಮಾ ಬಂದಾಗ, ನನಗೆ ನಂಬಿಕೆ ಬರಲು ಶುರುವಾಗಿತ್ತು. ಇವತ್ತು ಎಲ್ಲವೂ ಬದಲಾಗಿದೆ" ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

ಪ್ರಭಾಸ್ ಯಾರು ಅಂತಾನೇ ಗೊತ್ತಿರಲಿಲ್ಲ

ಪ್ಯಾನ್ ಇಂಡಿಯಾ ಸ್ಟಾರ್ ರಾಣಾ ದಗ್ಗುಬಾಟಿ ಮಜವಾದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿರೋ ರಾಣಾ ದಗ್ಗುಬಾಟಿ ಸ್ನೇಹಿತನಿಗೆ ಪ್ರಭಾಸ್ ಪರಿಚಯವಿರಲಿಲ್ಲ. ಆದರೆ, ಮಹೇಶ್ ಬಾಬುಗೆ ಪರಿಚಯವಿತ್ತು. ಆ ಘಟನೆಯನ್ನು ರಾಣಾ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.

" ಬಾಹುಬಲಿ ಸಿನಿಮಾ ಶೂಟಿಂಗ್ ಆಗುವುದಕ್ಕೂ ಮುನ್ನ ಈ ಸ್ನೇಹಿತನನ್ನು ಭೇಟಿಯಾಗಿದ್ದೆ. ಆಗ ಈ ಸಿನಿಮಾ ಬಗ್ಗೆ ಹೇಳಿದೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವವರು ಯಾರು ಎಂದು ಕೇಳಿದ್ರು. ನಾನು ಪ್ರಭಾಸ್ ಎಂದೆ. ಅವರು ಪ್ರಭಾಸ್ ಯಾರು? ಎಂದು ಮರು ಪ್ರಶ್ನೆ ಮಾಡಿದ್ದರು. ಬಳಿಕ ಪ್ರಭಾಸ್ ಸಿನಿಮಾಗಳನ್ನು ಹೇಳಿದೆ. ಅವರು ಪ್ರಭಾಸ್ ಸಿನಿಮಾಗಳನ್ನು ನೋಡಿರಲಿಲ್ಲ. ಆದರೆ, ಅವನಿಗೆ ಗೊತ್ತಿದ್ದ ಏಕೈಕ ತೆಲುಗು ನಟ ಚಿನ್ನು ಪತಿ ಎಂದಿದ್ರು. ಯಾರವರು ಅಂತ ಹುಡುಕಿದರೆ, ಆ ಚಿನ್ನು ನಮ್ರತ ಶಿರೋಡ್ಕರ್ ಅಂತ ಗೊತ್ತಾಯ್ತು. ನನಗೆ ಆಶ್ಚರ್ಯ ಆಗಿದ್ದೆಲ್ಲಿ ಅಂದ್ರೆ, ಆತ ಮಹೇಶ್‌ ಬಾಬುವನ್ನು ಈ ರೀತಿ ಪರಿಚಯ ಮಾಡಿಕೊಂಡಿದ್ದ. ಆಗ ನಾನು ಅವನಿಗೆ ಹೇಳಿದೆ, ಇನ್ನು ನಾಲ್ಕೈದು ವರ್ಷ ನಮ್ಮ ಆರ್ಮಿ ಇಲ್ಲಿಗೆ ಬಂದು ನಿಲ್ಲುತ್ತೆ ಎಂದು ಹೇಳಿದ್ದೆ." ಎಂದು ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.