ದಾಖಲೆ ಮೊತ್ತಕ್ಕೆ ಕತಾರ್ ಏರ್‌ವೇಸ್‌ನೊಂದಿಗೆ ಟೈಟಲ್ ಪ್ರಾಯೋಜಕತ್ವಕ್ಕೆ ಸಹಿ ಹಾಕಿದ ಆರ್‌ಸಿಬಿ!

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಕತಾರ್ ಏರ್‌ವೇಸ್‌ನೊಂದಿಗೆ 75 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ.
ಕತಾರ್ ಏರ್‌ವೇಸ್ ಮುಂದಿನ 3 ವರ್ಷಗಳ ಕಾಲ ಆರ್‌ಸಿಬಿಯ ಟೈಟಲ್ ಪ್ರಾಯೋಜಕರಾಗಿರುತ್ತಾರೆ.
ಈಗಾಗಲೇ ಕತಾರ್ ಏರ್‌ವೇಸ್ ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ತಮ್ಮ ಜಾಗತಿಕ ಬ್ರಾಂಡ್ ಅಂಬಾಸಿಡರ್ ನೇಮಿಸಿದೆ. ಇದೀಗ ಭಾರತದ ಅತಿದೊಡ್ಡ ಎನ್‌ಬಿಎಫ್‌ಸಿಗಳಲ್ಲಿ ಒಂದಾದ ಮುತ್ತೂಟ್ ಫಿನ್‌ಕಾರ್ಪ್ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಅತ್ಯಂತ ಜನಪ್ರಿಯ ಫ್ರಾಂಚೈಸಿ ಆರ್‌ಸಿಬಿಯ ಮುಖ್ಯ ಪ್ರಾಯೋಜಕತ್ವದಿಂದ ಹಿಂದೆ ಸರಿಯಲಿದೆ.
ಒಪ್ಪಂದದ ಪ್ರಕಾರ, ಇನ್ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಜೆರ್ಸಿಯ ಮುಂಭಾಗದಲ್ಲಿ ಕತಾರ್ ಏರ್‌ವೇಸ್‌ನ ಲೋಗೋ ಕಾಣಿಸಲಿದೆ.
"ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಒಂದೆರಡು ವಾರಗಳಲ್ಲಿ ಘೋಷಣೆ ಮಾಡಲಾಗುವುದು. ಇದು ಮೂರು ವರ್ಷಗಳವರೆಗೆ 75 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದು ಆರ್‌ಸಿಬಿಯ ಅತಿದೊಡ್ಡ ಒಪ್ಪಂದವಾಗಿದೆ," ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಉಲ್ಲೇಖಿಸಿದ್ದಾರೆ ಎಂದು ಮಿಂಟ್ ವರದಿ ಮಾಡಿದೆ.
ಐಪಿಎಲ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ಫ್ರಾಂಚೈಸಿ, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ 2022ರಲ್ಲಿ ಫಿನ್‌ಟೆಕ್ ಕಂಪನಿ ಸ್ಲೈಸ್‌ನೊಂದಿಗೆ 90 ಕೋಟಿ ರೂಪಾಯಿ ಮೌಲ್ಯದ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.
ಇನ್ನು ಐಪಿಎಲ್‌ನ ಎರಡನೇ ಅತ್ಯಂತ ಯಶಸ್ವಿ ಫ್ರಾಂಚೈಸಿ ಹಾಗೂ ನಾಲ್ಕು ಟ್ರೋಫಿಗಳನ್ನು ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಟಿವಿಎಸ್ ಗ್ರೂಪ್‌ನ ಯುರೋಗ್ರಿಪ್‌ನೊಂದಿಗೆ ಮೂರು ವರ್ಷಗಳ ಕಾಲ 70 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿತ್ತು.
ಐಪಿಎಲ್ ಪಂದ್ಯಾವಳಿಯ 15 ವರ್ಷಗಳ ಇತಿಹಾಸದಲ್ಲಿ ಒಂದು ಬಾರಿಯೂ ಚಾಂಪಿಯನ್ ಆಗಲು ವಿಫಲವಾಗಿರುವ ಆರ್‌ಸಿಬಿ ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ ಮತ್ತು ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಇಷ್ಟು ದೊಡ್ಡ ಮೊತ್ತದ ಒಪ್ಪಂದಕ್ಕೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಂಡದಲ್ಲಿರುವುದು ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಮಾರ್ಚ್ 31ರಂದು ಐಪಿಎಲ್ 2023ಕ್ಕೆ ಅದ್ಧೂರಿ ಚಾಲನೆ
16ನೇ ಐಪಿಎಲ್ ಋತು ಇದೇ ಮಾರ್ಚ್ 31ರಂದು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೆಣಸಾಡುವುದರೊಂದಿಗೆ ಆರಂಭವಾಗಲಿದೆ. ಆರ್‌ಸಿಬಿ ತಂಡವು ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಲಿದೆ.