ಕುತೂಹಲ ಮೂಡಿಸಿದ ಪ್ರಧಾನಿ ಮೋದಿ- ಯಡಿಯೂರಪ್ಪ ಭೇಟಿ: ರಾಜ್ಯದಲ್ಲಿ ನಾಯಕತ್ವದ ಕುರಿತು ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ದಿಢೀರ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರ ಕಾವೇರುತ್ತಿದ್ದು, ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಭರ್ಜರಿ ಪ್ರಚಾರ ನಡೆಸುತ್ತಿವೆ.
ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ, ಭ್ರಷ್ಟಾಚಾರ, ನಾಯಕರ ನಡುವಿನ ಭಿನ್ನಮತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಕರೆಸಿಕೊಂಡಿರುವ ಮೋದಿ, ರಾಜ್ಯದ ರಾಜಕೀಯ ಪರಿಸ್ಥಿತಿಗಳ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಎದ್ದು ಕಾಣುತ್ತಿದೆ. ಇದೇ ವೇಳೆ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚಾಗಿರುವ ಲಿಂಗಾಯತ ಸಮುದಾಯವನ್ನು ಸೆಳೆಯಬೇಕಾದರೆ ಯಡಿಯೂರಪ್ಪ ಅವರ ಪಾತ್ರ ಅತ್ಯಂತ ಮುಖ್ಯವಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಯಡಿಯೂರಪ್ಪ ಅವರನ್ನು ಬಿಜೆಪಿಯ ಇತರೆ ಮುಖಂಡರು ಕಡೆಗಣಿಸುತ್ತಿದ್ದಾರೆ. ಅಲ್ಲದೇ ಪರ್ಯಾಯ ನಾಯಕನ ಸ್ಥಾನಕ್ಕೆ ತಮ್ಮ ಹೆಸರು ಛಾಪಿಸಲು ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಮತ್ತು ಯಡಿಯೂರಪ್ಪ ಭೇಟಿ ಕುತೂಹಲ ಮೂಡಿಸಿದೆ.