ಬೀದರ್‌ ಉತ್ಸವ ರಾಜ್ಯಕ್ಕೆ ಮಾದರಿಯಾಗಲಿ

ಬೀದರ್‌ ಉತ್ಸವ ರಾಜ್ಯಕ್ಕೆ ಮಾದರಿಯಾಗಲಿ

ಬೀದರ್‌: 'ಬೀದರ್‌ ಉತ್ಸವ ರಾಜ್ಯದ ಮಾದರಿ ಉತ್ಸವವಾಗಬೇಕು. ಕಲಾವಿದರು ರಾಜ್ಯದ ಜನತೆ ಸ್ಮರಿಸುವ ರೀತಿಯಲ್ಲಿ ಕಾರ್ಯಕ್ರಮ ನೀಡಬೇಕು' ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಇಲ್ಲಿಯ ಕೋಟೆ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಬೀದರ್ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

'2005ರಲ್ಲಿ ಬೀದರ್‌ ಉತ್ಸವ ಆರಂಭವಾಗಿದೆ. ಕಾರಣಾಂತರಗಳಿಂದ ಅನೇಕ ವರ್ಷ ಉತ್ಸವ ನಡೆದಿರಲಿಲ್ಲ. ಜನರ ಬೇಡಿಕೆ ಹಾಗೂ ಜನಪ್ರತಿನಿಧಿಗಳ ಒಮ್ಮತದ ಅಭಿಪ್ರಾಯದ ಮೇರೆಗೆ ಈ ವರ್ಷ ಮತ್ತೆ ಉತ್ಸವ ಆರಂಭಿಸಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಒಂದು ತಿಂಗಳಿಂದ ಕಷ್ಟಪಟ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಜನರು ಉತ್ಸವವನ್ನು ಯಶಸ್ವಿಗೊಳಿಸಬೇಕು' ಎಂದು ಮನವಿ ಮಾಡಿದರು.

ಪಶು ಸಂಗೋ‍‍ಪನೆ ಸಚಿವ ಪ್ರಭು ಚವಾಣ್ ಮಾತನಾಡಿ, ''ಬೀದರ್‌ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ತಿಳಿಸಿದರು.

ಶಾಸಕ ರಹೀಂ ಖಾನ್, ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ ಬಾಬು, ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ. ಗುರುನಾಥ ಕೊಳ್ಳೂರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ವಾಗತಿಸಿದರು. ಅನುಪಮ ಭಟ್‌ ನಿರೂಪಣೆ ಮಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ, ವಂದಿಸಿದರು.

ಸಿಡಿಮದ್ದು ಪ್ರದರ್ಶನ:

ಬೀದರ್‌ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯುತ್ತಿದ್ದಂತೆಯೇ ನಗರದ ಕೋಟೆ ಆವರಣದಲ್ಲಿ ಮೂರು ಕಡೆ 20 ನಿಮಿಷ ಸಿಡಿಮದ್ದು ಪ್ರದರ್ಶನ ನಡೆಯಿತು. ಕೋಟೆ ಆವರಣದಲ್ಲಿ ಹಾಕಿದ್ದ ವಿದ್ಯುತ್‌ ದೀಪಗಳನ್ನು ಕೆಲಹೊತ್ತು ಆಫ್‌ ಮಾಡಿ ಆಗಸದಲ್ಲಿ ಪಟಾಕಿಯ ಚಿತ್ತಾರ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ ಕೇಕೆ ಹಾಕಿ ಸಂಭ್ರಮಿಸಿದರು.