ಐಕ್ಯತಾ ಸಮಾವೇಶಕ್ಕೆ ಹರಿದುಬಂದ ಜನಸಾಗರ

ಐಕ್ಯತಾ ಸಮಾವೇಶಕ್ಕೆ ಹರಿದುಬಂದ ಜನಸಾಗರ

ಚಿತ್ರದುರ್ಗ: ಕಾಂಗ್ರೆಸ್ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಐಕ್ಯತಾ ಸಮಾವೇಶಕ್ಕೆ ಜನಸಾಗರ ಹರಿದುಬಂದಿದ್ದು, ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸರ್ಕಾರಿ ವಿಜ್ಞಾನ ಕಾಲೇಜಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ.

ಮೈದಾನದಲ್ಲಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿದ್ದು, ಬಹುತೇಕ ಆಸನಗಳು ಭರ್ತಿಯಾಗಿವೆ. ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ನಡೆಯುತ್ತಿರುವ ಸಮಾವೇಶ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ಸೇರಿ ಅನೇಕ ವರಿಷ್ಠರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಧಾವಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಿಸಿ ಕಾಂಗ್ರೆಸ್ ಮತಬುಟ್ಟಿಗೆ ಕೈಹಾಕಿದ ಬಿಜೆಪಿಗೆ ಸಂದೇಶ ರವಾನಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಪಾರಂಪರಿಕ ಮತಗಳ ಕ್ರೂಢೀಕರಣ ಮಾಡಲು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಸಮಾವೇಶ ಸಂಘಟಿಸಲಾಗಿದೆ.