ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ: ಕಲಬುರ್ಗಿಯಲ್ಲಿ ಮತ್ತೊಬ್ಬ ಆರೋಪಿ ಬಂಧನ

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ: ಕಲಬುರ್ಗಿಯಲ್ಲಿ ಮತ್ತೊಬ್ಬ ಆರೋಪಿ ಬಂಧನ

ಬೆಂಗಳೂರು: 545 ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣ ( PSI Recruitment Scam ) ಸಂಬಂಧ, ಸಿಐಡಿಯಿಂದ ಅಕ್ರಮ ಎಸಗಿದವರ ಬೇಟೆಯನ್ನು ಮುಂದುವರೆಸಲಾಗಿದೆ. ಇಂದು ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಅಕ್ರಮ ಪ್ರಕರಣದಲ್ಲಿ ಬಂಧಿಸಿದೆ.

ಈಗಾಗಲೇ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಹಲವರನ್ನು ತನಿಖೆ ಹೊಣೆ ಹೊತ್ತಿರುವಂತ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇಂದು ತಮ್ಮ ಬೇಟೆಯನ್ನು ಮುಂದುವರೆಸಿದ್ದು, ಕಲಬುರ್ಗಿಯಲ್ಲಿ ಸರ್ಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ವಿಜಯ್ ಕುಮಾರ್ ಹೆಬ್ಬಾಳ್ಕರ್ ಎಂಬುವರನ್ನು ಬಂಧಿಸಲಾಗಿದೆ.

ಬಂಧಿತ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ವಿಜಯ್ ಕುಮಾರ್ ಹೆಬ್ಬಾಳ್ಕರ್, ಪಿಎಸ್‌ಐ ನೇಮಕಾತಿ ಪರೀಕ್ಷೆ ಆರಂಭಕ್ಕೂ ಮುನ್ನಾ, ಪರೀಕ್ಷಾ ಕೇಂದ್ರದ ಕೊಠಡಿಗೆ ತೆರಳಿ, ಅಕ್ರಮಕ್ಕೆ ಸಹಾಯವಾಗಲು ಬ್ಲೂ ಟೂತ್ ಇಟ್ಟಿದ್ದ ಎಂಬ ಆರೋಪ ಕೇಳಿ ಬಂದಿದೆ.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿದ್ದಂತ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಸೂಚನೆಯ ಮೇರೆಗೆ ವಿಜಯ್ ಕುಮಾರ್ ಬ್ಲೂಟೂತ್ ಇಟ್ಟು ಬಂದಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಕ್ರಮಕ್ಕೆ ಅಭ್ಯರ್ಥಿಗಳಿಗೆ ಸಹಾಯ ಮಾಡಿದಂತ ಆರೋಪದಲ್ಲಿ ಕಲಬುರ್ಗಿಯ ಸರ್ಕಾರಿ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯ ಪ್ರಾಧ್ಯಾಪಕ ವಿಜಯ್ ಕುಮಾರ್ ಹೆಬ್ಬಾಳ್ಕರ್ ಅನ್ನು ಸಿಐಡಿ ಬಂಧಿಸಿದೆ.