ಜೆಡಿಎಸ್ ಕದ ತಟ್ಟಿದ್ರಾ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು?!

ಹುಬ್ಬಳ್ಳಿ: ಈಗ ಹುಬ್ಬಳ್ಳಿ ಧಾರವಾಡಕ್ಕೆ ಪಂಚರತ್ನ ಯಾತ್ರೆ ತಲುಪಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹು-ಧಾ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ಮಾಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ರಾಜಕಾರಣದಲ್ಲಿ ಸಾಕಷ್ಟು ಕಾಂಗ್ರೆಸ್-ಬಿಜೆಪಿ ನಾಯಕರ ಈ ಭೇಟಿ ಕುತೂಹಲ ಕೆರಳಿಸಿದೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು ನಾಯಕರ ಈ ನಡೆ ಕುತೂಹಲ ಮೂಡಿಸಿದೆ. ಕುಮಾರಸ್ವಾಮಿ ಆಗಮನದ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ಮಾಡಿದರೂ ಅದರಲ್ಲಿಯೂ ತೀವ್ರ ಕುತೂಹಲ ಮೂಡಿಸಿದ್ದು ಬಿಜೆಪಿಯ ಮಾಜಿ ಶಾಸಕರೊಬ್ಬರ ಉಪಸ್ಥಿತಿ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಈ ಮುಖಂಡರಿಗೆ ಟಿಕೆಟ್ ತಪ್ಪುವ ಭೀತಿ ಇರುವ ಕಾರಣ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಸ್ವ ಪಕ್ಷದಿಂದ ಟಿಕೆಟ್ ಸಿಗುವ ಆತ್ಮವಿಶ್ವಾಸದಲ್ಲಿ ನಾಯಕರು ಇದ್ದರು. ಆದರೆ ಕೊನೆಗಳಿಗೆಯಲ್ಲಿ ಈ ಮುಖಂಡರಿಗೆ ಟಿಕೆಟ್ ಕೈ ತಪ್ಪಿದರೆ ಜೆಡಿಎಸ್‌ನಿಂದ ಸ್ಪರ್ಧೆಗಿಳಿಯಲು ಇವರು ತಯಾರಿ ನಡೆಸಿದ್ದಾರೆ. ಒಟ್ಟಿನಲ್ಲಿ ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬ ಉತ್ಸಾಹದಲ್ಲಿ ಮುಖಂಡರಿದ್ದಾರೆ. ಟಿಕೆಟ್ ಕೈತಪ್ಪಲಿರುವ ಮುಖಂಡರು ಪಕ್ಷಾಂತರಕ್ಕೆ ಸಜ್ಜಾಗಿದ್ದಾರಾ ಎಂಬ ಪ್ರಶ್ನೆ ಮೂಡಿದ್ದು ಇದು ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಂದಿಗ್ಧತೆ ತರಲಿದೆ.
ಅಂದ ಹಾಗೆ ಇದೀಗ ಜೆಡಿಎಸ್ ಕದ ತಟ್ಟಲು ಅವಳಿ ನಗರದ ಮುಖಂಡರು ಇವರು:
1. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ.
2. ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇಸ್ಮಾಯಿಲ್ ತಮಟಗಾರ.
3. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ದೀಪಕ್ ಚಿಂಚೋರೆ.
ಈ ಮೂವರು ಪ್ರಮುಖ ಮುಖಂಡರು ಸೇರಿದಂತೆ ಅನೇಕ ನಾಯಕರಿಂದ ಎಚ್.ಡಿ.ಕುಮಾರಸ್ವಾಮಿ ಭೇಟಿ.