ಹೊಸದಿಲ್ಲಿ: ಚೀನಿ ಸಾಲ ಅಪ್ಲಿಕೇಶನ್‌ ಜಾಲಕ್ಕೆ ಬೀಳದಿರಿ

ಹೊಸದಿಲ್ಲಿ: ಚೀನಿ ಸಾಲ ಅಪ್ಲಿಕೇಶನ್‌ ಜಾಲಕ್ಕೆ ಬೀಳದಿರಿ

ಹೊಸದಿಲ್ಲಿ: ಚೀನಾದ ಸಾಲ ಅಪ್ಲಿಕೇಶನ್‌ ಹಗರಣ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಕೋವಿಡ್ ನಂತರ ಚೀನಿ ಸಾಲ ಅಪ್ಲಿಕೇಶನ್‌ಗಳ ಮೂಲಕ ಹಲವರು ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಕೋವಿಡ್‌ನಿಂದ ಆರ್ಥಿಕ ಬಿಕ್ಕಟ್ಟು ಮತ್ತು ಉದ್ಯೋಗ ನಷ್ಟ ಸೇರಿದಂತೆ ಹಲವು ಸವಾಲುಗಳಿಗೆ ಕಾರಣವಾಯಿತು.

ಚೀನೀ ಸಾಲದ ಅಪ್ಲಿಕೇಶನ್‌ಗಳು ಲಕ್ಷಾಂತರ ನಿರುದ್ಯೋಗಿಗಳಿಗೆ ಕಿರು ಸಾಲ ನೀಡಿತು. ನಂತರ ವಿವಿಧ ನೆಪದಲ್ಲಿ ಅವರನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ಅವರಿಂದ ಮೊತ್ತವನ್ನು ವಸೂಲಿ ಮಾಡಿತು. ಸರ್ಕಾರದ 'ದುರ್ಬಲ' ನಿಯಮಗಳು ಮತ್ತು ನಿಬಂಧನೆಗಳಿಂದಾಗಿ ಇದೆಲ್ಲವೂ ಸಂಭವಿಸಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ.

ವಿವಿಧ ರೀತಿಯಲ್ಲಿ ಬೆದರಿಕೆ, ಮಾನಹರಣ: ಸಾಲ ಪಡೆದ ಹಲವರಿಗೆ ದಂಡದ ಮೊತ್ತದ ಜೊತೆಗೆ ಸಂಪೂರ್ಣ ಬಡ್ಡಿಯನ್ನು ಮರುಪಾವತಿಸದಿದ್ದರೆ ಅವರ ಹೆಸರು ಮತ್ತು ಫೋಟೋಗಳನ್ನು ಪೋರ್ನ್ ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆರೋಪಿಗಳು ಸಾಲ ಪಡೆದವರ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತ ವ್ಯಕ್ತಿಗಳಿಗೆ ಸಂದೇಶ ಕಳುಹಿಸುತ್ತಾರೆ. ಸಾಲಪಡೆದವರನ್ನು ಕಳ್ಳರಂತೆ ಬಿಂಬಿಸಿದ್ದರು. ಮತ್ತೊಂದು ಚೀನೀ ಸಾಲದ ಅಪ್ಲಿಕೇಶನ್‌ನಿಂದ ಸಾಲವನ್ನು ತೆಗೆದುಕೊಳ್ಳುವಂತೆ ಮಾಡುವ ತಂತ್ರವೂ ಇದರಲ್ಲಿ ಅಡಗಿದೆ.

ಚೀನಾ ಜಾಲ: ಮನಿ ಬಾಕ್ಸ್, ನೀಡ್ ರೂಪಾಯಿ, ಮೈ ಬ್ಯಾಂಕ್, ಲೋನ್ ಗ್ರಾಮ್, ಕೊಕೊ ಕ್ಯಾಶ್, ಪಾಂಡಾ ರೂಪಾಯಿ ಮತ್ತು ಕ್ಯಾಶ್ ಪಾಟ್. ಅಪ್ಲಿಕೇಶನ್‌ಗಳನ್ನು ಹಾಂಗ್ ಕಾಂಗ್ ಮತ್ತು ಇತರ ನಗರಗಳಲ್ಲಿ ನೆಲೆಸಿರುವ ಚೀನೀ ಪ್ರಜೆಗಳು ನಿಯಂತ್ರಿಸುತ್ತಿದ್ದರು. ಈ ಪೈಕಿ ಅಪ್ಲಿಕೇಶನ್‌ ಪ್ರಮುಖ ಸೂತ್ರಧಾರರಾದ ಕ್ಯು ಯಾಂಗ್ ಪೆಂಗ್ ಮತ್ತು 'ಮಿ. ಲೈಲ್ ಭಾರತಕ್ಕೆ ಭೇಟಿ ನೀಡಿದ್ದರು. ಕೆಲವು ಭಾರತೀಯ ಪ್ರಜೆಗಳ ಸಹಾಯ ಪಡೆದು ತಮ್ಮ ಕುತಂತ್ರ ವ್ಯವಹಾರ ಜಾಲವನ್ನು ವಿಸ್ತರಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಇಡಿ ವಿಚಾರಣೆ ಸಮಯದಲ್ಲಿ ಈ ಇಬ್ಬರು ಚೀನಿ ವ್ಯಕ್ತಿಗಳು ಭಾರತೀಯ ನಕಲಿ ದಾಖಲೆಗಳನ್ನು ವ್ಯವಹಾರಕ್ಕೆ ಬಳಸಿರುವುದು ತಿಳಿದು ಬಂದಿದೆ. ಅಲ್ಲದೆ ದೇಶದಲ್ಲಿ ಅಪ್ಲಿಕೇಶನ್‌ಗಳಿಗೆ ಡಮ್ಮಿ ನಿರ್ದೇಶಕರನ್ನು ನೇಮಿಸಿದ್ದಾರೆ ಎಂದು ಇಡಿ ಈ ಹಿಂದೆ ಹೇಳಿತ್ತು. ಚೀನಾದ ಪ್ರಜೆಗಳಿಗೆ ಸಂಬಂಧಿಸಿದ ಹಲವಾರು ಅಪ್ಲಿಕೇಶನ್‌ಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯು 18 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಸರ್ಕಾರದ ನ್ಯೂನ್ಯತೆಗಳನ್ನು ಬಳಸಿಕೊಂಡು ದೊಡ್ಡ ಜಾಲವೊಂದು ಕುಕೃತ್ಯ ನಡೆಸುತ್ತಿರುವುದು ಸತ್ಯವಾದರೂ ಜನರು ಜಾಗೃತಗೊಳ್ಳದೆ ಕೇವಲ ಪೊಲೀಸರು, ಸರ್ಕಾರದ ಮೇಲೆ ಆರೋಪ ಹೊರಿಸುವುದು ಸರಿಯಲ್ಲ.