ಹುಬ್ಬಳ್ಳಿಗೆ ವಂದೇ ಭಾರತ್: ವೇಳಾಪಟ್ಟಿ ಕೇಳಿದ ರೈಲ್ವೆ ಮಂಡಳಿ

ಬೆಂಗಳೂರು: ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಶುಕ್ರವಾರ ಅಧಿಕೃತವಾಗಿ ಚಾಲನೆ ದೊರಕಲಿದ್ದು, ಈ ನಡುವೆ ಬೆಂಗಳೂರು-ಹುಬ್ಬಳ್ಳಿ ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುವ ಕಾಲ ಹತ್ತಿರವಾಗುತ್ತಿದೆ.
ಈ ಎರಡು ನಗರಗಳ ನಡುವೆ ರೈಲು ಸಂಚಾರ ಆರಂಭಿಸಲು ವೇಳಾಪಟ್ಟಿ ನೀಡುವಂತೆ ರೈಲ್ವೆ ಮಂಡಳಿಯು ನೈರುತ್ಯ ರೈಲ್ವೆಯನ್ನು ಕೇಳಿದೆ. ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಅವರು ರಾಜ್ಯದ ಸಂಸದರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದರು. ಈ ವೇಳೆ ರಾಜ್ಯಸಭೆ ಸದಸ್ಯ ಲೇಹರ್ ಸಿಂಗ್ ಅವರು ಸಲ್ಲಿಸಿದ ಮನವಿಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರು. ಲಹರ್ ಸಿಂಗ್ ಸಿರೋಯಾ ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು, ಈ ವಿವರ ನೀಡಿದ್ದಾರೆ.
'ಧಾರವಾಡದ ತನಕ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಕೋರಿದ್ದಾರೆ. ಅದನ್ನೂ ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ. ಚಿಕ್ಕಜಾಜೂರು ಬಳಿ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಇಡೀ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ಎರಡೂ ಕಾಮಗಾರಿ ಪೂರ್ಣಗೊಳ್ಳಲಿದ್ದು, ಆ ಬಳಿಕವೇ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲು ಸಾಧ್ಯ. ಕಾಮಗಾರಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗುವುದು' ಎಂದು ನೈರುತ್ಯ ರೈಲ್ವೆ ಅಧಿಕಾರಿಯೊಬ್ಬರು ವಿವರಿಸಿದರು.
ಯಶವಂತಪುರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಪುನರ್ ಅಭಿವೃದ್ಧಿ ಯೋಜನೆಗಳಿಗೂ ಮಂಜೂರಾತಿ ದೊರಕಿದೆ. ಕಂಟೋನ್ಮೆಂಟ್ ನಿಲ್ದಾಣದ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ನ.23ರಂದು ತೆರೆಯಲಾಗುತ್ತದೆ. ಯಶವಂತಪುರ ನಿಲ್ದಾಣದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಎರಡು ಕಾಮಗಾರಿಗಳಿಗೂ ಪ್ರಧಾನ ಮಂತ್ರಿ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಸಂಜೀವ್ ಕಿಶೋರ್ ವಿವರಿಸಿದ್ದಾರೆ.
ಮೈಸೂರು ರೈಲು ನಿಲ್ದಾಣ ಮತ್ತು ನಾಗೇನಹಳ್ಳಿ ನಿಲ್ದಾಣಗಳ ಅಭಿವೃದ್ಧಿಗೆ ₹493 ಕೋಟಿ ಮೊತ್ತದ ಕಾಮಗಾರಿಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.