ಸಚಿವ ಸ್ಥಾನ ಸಿಗದ ಶಾಸಕರ ಬೆಂಬಲಿಗರಿಂದ ಹಲವೆಡೆ ಪ್ರತಿಭಟನೆ

ಬೆಂಗಳೂರು, ಆ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಹಿನ್ನೆಲೆಯಲ್ಲಿ ಶಾಸಕರ ಬೆಂಬಲಿಗರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಸಚಿವಾಕಾಂಕ್ಷಿಗಳಾದ ರಾಜುಗೌಡ, ನೆಹರು ಓಲೇಕಾರ್, ಸುಭಾಷ್ ಗುತ್ತೆದಾರ್ ಮತ್ತಿತರ ಶಾಸಕರ ಬೆಂಬಲಿಗರು ನಗರದ ವಿವಿಧೆಡೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುರಪುರದಲ್ಲಿ ರಾಜುಗೌಡ ಬೆಂಬಲಿಗರು ರಸ್ತೆತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಬಾರಿ ಬೊಮ್ಮಾಯಿ ಸಂಪುಟದಲ್ಲಿ ರಾಜುಗೌಡ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದೆವು. ಆದರೆ, ನಮ್ಮ ಭರವಸೆ ಹುಸಿಯಾಯಿತು. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂಬ ಎಚ್ಚರಿಕೆ ನೀಡಿದರು. ಬೆಂಗಳೂರು ಕ್ಷೇತ್ರದಲ್ಲೂ ರಾಜುಗೌಡ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಶಾಸಕ ನೆಹರು ಓಲೇಕಾರ್ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಅವರ ಬೆಂಬಲಿಗರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದರು. ಹಾವೇರಿ, ಬೆಂಗಳೂರು ಸೇರಿದಂತೆ ಹಲವಡೆ ಪ್ರತಿಭಟನೆ ನಡೆಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಓಲೇಕಾರ್ ಬೆಂಬಲಿಗರು ಉರುಳುಸೇವೆ ಮಾಡಿದರು. ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಮೈಸೂರಿನಲ್ಲಿ ರಾಮದಾಸ್‍ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಅವರ ಬೆಂಬಲಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮದಾಸ್ ಅವರು ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿ ಪಕ್ಷವನ್ನು ಕಟ್ಟಿ ಬೆಳೆಸಿ ಅರ್ಹತೆ ಹೊಂದಿರುವವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಅಬಿನಂದನೆಗಳು. ಕರ್ನಾಟಕವನ್ನು ನಂ.1 ಸ್ಥಾನಕ್ಕೆ ತನ್ನಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇತ್ತ ಕಲಬುರಗಿಯಲ್ಲಿ ಐವರು ಶಾಸಕರಿದ್ದರೂ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಲಾಗಿದೆ. ಹಿರಿಯರಾಗಿದ್ದರೂ ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸುಭಾಷ್ ಗುತ್ತೆದಾರ್ ಬೆಂಬಲಿಗರು ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಧರಣಿ, ಪ್ರತಿಭಟನೆ ನಡೆಸಿದರು.
ಕಲಬುರಗಿಯ ವಿವಿಧ ವೃತ್ತಗಳಲ್ಲಿ ಪ್ರತಿಭಟನೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಬಲ ಸಮುದಾಯಗಳಿಗೆ ಮಾತ್ರ ಮಣೆ ಹಾಕಲಾಗಿದೆ. ಹಿಂದುಳಿದವರನ್ನು, ದಲಿತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದೇವೆ ಎಂಬ ಎಚ್ಚರಿಕೆ ನೀಡಿದರು.
ಚಿತ್ರದುರ್ಗದ ತಿಪ್ಪಾರೆಡ್ಡಿಯ ಬೆಂಬಲಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಯಡಿಯೂರಪ್ಪ ಸಂಪುಟದಲ್ಲೇ ಸ್ಥಾನ ಸಿಗಬೇಕಿತ್ತು. ಬೊಮ್ಮಾಯಿ ಅವರ ಸಂಪುಟದಲ್ಲೂ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.