ವಿಧಾನ ಕದನ 2023: ಕೋಟೆನಾಡಲ್ಲಿ ಗೆಲುವಿಗಿಂತ ಟಿಕೆಟ್‌ಗಾಗಿ ಮಹಾಯುದ್ಧ

ವಿಧಾನ ಕದನ 2023: ಕೋಟೆನಾಡಲ್ಲಿ ಗೆಲುವಿಗಿಂತ ಟಿಕೆಟ್‌ಗಾಗಿ ಮಹಾಯುದ್ಧ

ಚಿತ್ರದುರ್ಗ: ವೀರ ಮದಕರಿನಾಯಕನ ನೆಲ ಕೋಟೆನಾಡು ಚಿತ್ರದುರ್ಗ ಕ್ಷೇತ್ರದಲ್ಲಿ ಚುನಾವಣ ಕಾವು ಜೋರಾಗಿದೆ. ಈ ಬಾರಿ ಮತದಾನದ ಅನಂತರದ ಗೆಲುವಿಗಿಂತ ಪಕ್ಷಗಳ ಟಿಕೆಟ್‌ ಯಾರಿಗೆ ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಜೆಡಿಎಸ್‌ ಕೂಡಾ ಚುನಾವಣ ಕಣಕ್ಕಿಳಿಯಲಿದ್ದು , ಅಳೆದು ತೂಗಿ ಟಿಕೆಟ್‌ ಕೊಡುವ ಸಾಧ್ಯತೆ ಇದೆ.

ಮೊದಲು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡ ಜಿ.ಎಚ್‌. ತಿಪ್ಪಾರೆಡ್ಡಿ ಈ ಕ್ಷೇತ್ರದ ಹಾಲಿ ಶಾಸಕರು. ಈ ಬಾರಿಯೂ ಅವರಿಗೆ ಬಿಜೆಪಿ ಟಿಕೆಟ್‌ ಬಹುತೇಕ ಅಂತಿಮ ಎನ್ನಲಾಗುತ್ತಿದೆ. ಆದರೆ ವಯಸ್ಸಿನ ಆಧಾರದಲ್ಲಿ ಟಿಕೆಟ್‌ ಕೈ ತಪ್ಪಬಹುದು ಎನ್ನುವ ಸಣ್ಣ ಚರ್ಚೆಯೂ ನಡೆದಿದೆ. ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರ ಜಿ.ಎಸ್‌.ಅನಿತ್‌ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಪುತ್ರ ಡಾ| ಸಿದ್ಧಾರ್ಥ ಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಗೆಲ್ಲುವ ಮಾನದಂಡವೇ ಅಂತಿಮ ಎನ್ನಲಾಗಿದೆ. ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಜಿ.ಎಚ್‌. ತಿಪ್ಪಾರೆಡ್ಡಿ ಹಿಡಿತ ಸಾ ಧಿಸಿದ್ದಾರೆ. ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು, ಆರನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೀಗಾಗಿ ಇವರಿಗೇ ಟಿಕೆಟ್‌ ಸಿಕ್ಕರೆ ಕ್ಷೇತ್ರದಲ್ಲಿ ಭರ್ಜರಿ ಫೈಟ್‌ ನಡೆಯುವುದಂತೂ ಪಕ್ಕಾ.

ಕಾಂಗ್ರೆಸ್‌ನಲ್ಲೇ ಆಕಾಂಕ್ಷಿಗಳು ಜಾಸ್ತಿ: ಈ ಬಾರಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪೈಪೋಟಿ ಜೋರಾಗಿದೆ. ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ರಘು ಆಚಾರ್‌, ಕಳೆದ ಬಾರಿ ಜೆಡಿಎಸ್‌ನಿಂದ ಸ್ಪ ರ್ಧಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದ ಕೆ.ಸಿ.ವೀರೇಂದ್ರ (ಪಪ್ಪಿ), ಕಳೆದ ಬಾರಿಯ ಕಾಂಗ್ರೆಸ್‌ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಾಜಿ ಶಾಸಕ ಎ.ವಿ.ಉಮಾಪತಿ ಸಹಿತ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಕಾಂಗ್ರೆಸ್‌ನಲ್ಲಿದೆ.

ಇದರಲ್ಲಿ ಜಿ.ರಘು ಆಚಾರ್‌, ವೀರೇಂದ್ರ ಹಾಗೂ ಎಸ್‌.ಕೆ.ಬಸವರಾಜನ್‌ ಮಧ್ಯೆ ಟಿಕೆಟ್‌ಗಾಗಿ ಸ್ಪರ್ಧೆ ಏರ್ಪಟ್ಟಿದೆ. ಈ ಮೂರು ಜನ ಕಾಂಗ್ರೆಸ್‌ ಪರವಾಗಿ ಭರ್ಜರಿ ಪ್ರಚಾರವನ್ನೂ ಆರಂಭಿಸಿದ್ದಾರೆ. ರಘು ಆಚಾರ್‌ ಕಾಂಗ್ರೆಸ್‌ ವರಿಷ್ಠರ ಜತೆ ಸಂಪರ್ಕ ಸಾಧಿ ಸಿದ್ದು, ಟಿಕೆಟ್‌ ತಮಗೆ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಚಿತ್ರದುರ್ಗ ನಗರದ ಹೊರವಲಯದಲ್ಲಿ ಮನೆ ಕಟ್ಟಿ ಭರ್ಜರಿ ಗೃಹಪ್ರವೇಶವನ್ನೂ ಮಾಡಿದ್ದಾರೆ. ಹಿರಿಯ ನಟ ದೊಡ್ಡಣ್ಣ ಅವರ ಅಳಿಯನಾಗಿರುವ ವೀರೇಂದ್ರ (ಪಪ್ಪಿ )ಅವರ ಹೆಸರು ಕೂಡ ಹೈಕಮಾಂಡ್‌ ಬಳಿ ಇದೆ ಎನ್ನಲಾಗಿದೆ. ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಕ್ಷೇತ್ರದಲ್ಲಿ ಪ್ರಭಾವಿಯಾಗಿದ್ದರೂ, ಮುರುಘಾ ಮಠದಲ್ಲಿ ಇತೀ¤ಚೆಗೆ ನಡೆದ ಕೆಲವು ಬೆಳವಣಿಗೆ ಹಾಗೂ ಇವರ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಜೆಡಿಎಸ್‌ ನಡೆ ಏನು?: ಜೆಡಿಎಸ್‌ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್‌ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಎರಡನೇ ಸ್ಥಾನಕ್ಕೇರಿದ್ದ ಕೆ.ಸಿ.ವೀರೇಂದ್ರ (ಪಪ್ಪಿ) ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಚಿತ್ರದುರ್ಗ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಇಲ್ಲಿ ಜೆಡಿಎಸ್‌ ನಡೆ ಏನು ಎನ್ನುವುದು ಮುಖ್ಯವಾಗಲಿದೆ. ಆದ್ದರಿಂದ ಜೆಡಿಎಸ್‌ ಅಳೆದು ತೂಗಿ ಟಿಕೆಟ್‌ ಘೋಷಿಸುವ ಲೆಕ್ಕಾಚಾರ ಮಾಡುತ್ತಿದೆ. ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದವರು ಜೆಡಿಎಸ್‌ ಕದ ತಟ್ಟುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಜೆಡಿಎಸ್‌ ಸ್ಪರ್ಧೆ ಯಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯೂ ಇದೆ.

ಕೈ ಟಿಕೆಟ್‌ ತಪ್ಪಿದರೆ ಬಸವರಾಜನ್‌ ಪಕ್ಷೇತರ ಸ್ಪರ್ಧೆ
ಈ ಬಾರಿಯ ವಿಶೇಷ ಎಂದರೆ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಾರ್ಟಿ ಎಂಟ್ರಿಯಾಗಿದ್ದು, ಭೀಮಸಮುದ್ರದ ಜಗದೀಶ್‌ ಕಣಕ್ಕಿಳಿಯುವ ಹಂಬಲದಿಂದ ಕಳೆದೊಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದ ಗ್ರಾಮ ಗ್ರಾಮವನ್ನೂ ಎಎಪಿ ತಲುಪಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಜಗದೀಶ್‌ ಅಭ್ಯರ್ಥಿಯಾಗಿರುವುದರಿಂದ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಎಸ್‌ಡಿಪಿಐನಿಂದ ಬಾಳೆಕಾಯಿ ಶ್ರೀನಿವಾಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕ್ಷೇತ್ರದಲ್ಲಿ ದಲಿತ, ಮುಸ್ಲಿಂ ಮತಗಳು ವಿಭಜನೆಯಾಗುವ ಆತಂಕ ರಾಷ್ಟ್ರೀಯ ಪಕ್ಷಗಳನ್ನು ಕಾಡುತ್ತಿದೆ.