ವಿಜಯವಾಡ: ಆಂಧ್ರಪ್ರದೇಶದ ರಾಜ್ಯಪಾಲರಾಗಿ ನಿವೃತ್ತ ನ್ಯಾಯಮೂರ್ತಿ ನಜೀರ್ ಪ್ರಮಾಣ ವಚನ ಸ್ವೀಕಾರ

ವಿಜಯವಾಡ: ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ಆಂಧ್ರಪ್ರದೇಶದ ರಾಜ್ಯಪಾಲರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನ್ಯಾಯಮೂರ್ತಿ ನಜೀರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ವಿರೋಧ ಪಕ್ಷದ ನಾಯಕ ಎನ್.ಚಂದ್ರಬಾಬು ನಾಯ್ಡು, ಸಚಿವರು, ನ್ಯಾಯಾಧೀಶರು ಮತ್ತು ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಮಾಣ ವಚನ ಸ್ವೀಕಾರದ ನಂತರ ನಾಯಕರು ಮತ್ತು ಅಧಿಕಾರಿಗಳು ನೂತನ ರಾಜ್ಯಪಾಲರನ್ನು ಸ್ವಾಗತಿಸಿದರು.ಫೆಬ್ರವರಿ 12 ರಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಜೀರ್ ಅವರನ್ನು ರಾಜ್ಯಪಾಲರಾಗಿ ನೇಮಿಸಿದ್ದರು.
ಕರ್ನಾಟಕ ಮೂಲದವರಾದ ನಜೀರ್ ಅವರು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು ಮತ್ತು 2017 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದಲ್ಲಿ ಅವರು ಇದ್ದರು.
ತ್ರಿವಳಿ ತಲಾಖ್ ವಿವಾದದ ಬಗ್ಗೆ ತೀರ್ಪು ನೀಡಿದ ಪೂರ್ಣ ಪೀಠದಲ್ಲಿ ನ್ಯಾಯಮೂರ್ತಿ ನಜೀರ್ ಕೂಡ ಇದ್ದರು. ತ್ರಿವಳಿ ತಲಾಖ್ ನಿಷೇಧಿಸುವ ಬಹುಮತದ ತೀರ್ಪನ್ನು ವಿರೋಧಿಸಿದ ಇಬ್ಬರು ನ್ಯಾಯಾಧೀಶರಲ್ಲಿ ಅವರು ಒಬ್ಬರಾಗಿದ್ದರು.