ರೈತರ ಸಾಲ ಮನ್ನಾ ಮಾಡುವವರಿಗೆ ಚುನಾವಣೆಯಲ್ಲಿ ಬೆಂಬಲ: ಕುರುಬೂರು ಶಾಂತಕುಮಾರ್

ಕಲಘಟಗಿ: 'ಕೇಂದ್ರ ಸರ್ಕಾರ ದೇಶದ ಉದ್ಯಮಿಗಳ ₹10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಹಾಗೆ ಅತಿವೃಷ್ಟಿ, ಕೋವಿಡ್ ಸಂಕಷ್ಟದಿಂದ ತತ್ತರಿಸಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿದರೆ ಆ ಪಕ್ಷಕ್ಕೆ ಬೆಂಬಲ ನೀಡಲಾಗುವುದು' ಎಂದು ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ. ಅದೇ ರೀತಿ ರೈತರಿಗೆ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೆಯಾಗಬೇಕು. ಹಗಲಿನ ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡಬೇಕು ಎಂದರು.
ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಫಸಲ್ ಬಿಮಾ ಯೋಜನೆ ತಿದ್ದುಪಡಿ ಮಾಡಿ, ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಅನ್ವಯ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಸಂತ ಡಾಕಪ್ಪನವರ, ಉಳವಪ್ಪ ಬಡಿಗೇರ, ಪರಶುರಾಮ ಎತ್ತಿನಗುಡ್ಡ, ಶಂಕರಗೌಡ ಪಾಟೀಲ, ಬಸನಗೌಡ ಶಿದ್ದನಗೌಡ್ರ, ರಾಮಣ್ಣ ಪಾಟೀಲ, ಮಲ್ಲೇಶಿ ಜಿನ್ನೂರು, ಮಂಜಪ್ಪ ಹೊನ್ನಿಹಳ್ಳಿ ಇದ್ದರು.