ರೆಡ್ಡಿಗೆ ಕುರಿ ಕೊಡಲು ಹೊರಟಿದ್ದ ಅಭಿಮಾನಿ; ತಡೆದ ಅಧಿಕಾರಿಗಳು

ಗಂಗಾವತಿ (ಕೊಪ್ಪಳ ಜಿಲ್ಲೆ): ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಅವರಿಗೆ 100 ಕುರಿಗಳನ್ನು ಉಡುಗೊರೆ ನೀಡಲು ಹೊರಟಿದ್ದ ಅಭಿಮಾನಿಯೊಬ್ಬರನ್ನು ಅಧಿಕಾರಿಗಳು ಭಾನುವಾರ ತಡೆದರು.
ಇಲ್ಲಿನ ಕನಕಗಿರಿ ರಸ್ತೆಯಲ್ಲಿರುವ ರೆಡ್ಡಿ ಮನೆಗೆ ಅವರ ಅಭಿಮಾನಿ ಯಮನೂರಪ್ಪ ಪುಂಡಗೌಡ ಎನ್ನುವವರು ವಾಹನದಲ್ಲಿ ಕುರಿಗಳನ್ನು ತುಂಬಿಕೊಂಡು ಬಂದಿದ್ದರು.
ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಗಂಗಾವತಿ ತಹಶೀಲ್ದಾರ್ ಮಂಜುನಾಥ 'ಚುನಾವಣಾ ಆಯೋಗದ ನಿಯಮದ ಪ್ರಕಾರ ಅಭ್ಯರ್ಥಿ ಎಂದು ಘೋಷಿಸಿಕೊಂಡವರಿಗೆ ಉಡುಗೊರೆ ನೀಡಲು ಅವಕಾಶವಿಲ್ಲ. ಆದ್ದರಿಂದ ತಡೆದಿದ್ದೇವೆ' ಎಂದರು. ಜನಾದರ್ನರೆಡ್ಡಿ ಹೊಸ ಪಕ್ಷ ಸ್ಥಾಪಿಸಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾಗ ಯಮನೂರಪ್ಪ ಕುರಿ ಕೊಡುವುದಾಗಿ ವಾಗ್ದಾನ ಘೋಷಿಸಿದ್ದರು.