ಮಾ. 8 ರಂದು ತ್ರಿಪುರಾದಲ್ಲಿ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸಮಾರಂಭ ; ಪ್ರಧಾನಿ ಮೋದಿ ಭಾಗಿ

ನವದೆಹಲಿ : ಮಾರ್ಚ್ 8 ರಂದು (ಬುಧವಾರ) ತ್ರಿಪುರಾದಲ್ಲಿ ಹೊಸ ಬಿಜೆಪಿ-ಐಪಿಎಫ್‌ಟಿ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ತ್ರಿಪುರ ವಿಧಾನಸಭೆ ಚುನಾವಣೆಯಲ್ಲಿ 60 ಸದಸ್ಯ ಬಲದ ಸಂಖ್ಯೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷ ಐಪಿಎಫ್‌ಟಿ ಒಂದು ಸ್ಥಾನವನ್ನು ಪಡೆದಿತ್ತು. ಇದೀಗ ಮಿತ್ರ ಪಕ್ಷಗಳು ಒಗ್ಗೂಡಿ ಅಧಿಕಾರ ನಡೆಸಲು ಮುಂದಾಗಿವೆ.
ಮುಖ್ಯಮಂತ್ರಿ ಮಾಣಿಕ್ ಸಹಾ ಶುಕ್ರವಾರ (ಮಾರ್ಚ್ 3) ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರಿಗೆ ಸಲ್ಲಿಸಿದ್ದು, ಮಾರ್ಚ್ 8 ರಂದು ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎನ್‌ಇಡಿಎ ಅಧ್ಯಕ್ಷರಾಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕರು ಮತ್ತು ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಹ ಆಹ್ವಾನಿಸಲಾಗುವುದು ಎಂದು ತ್ರಿಪುರಾದ ಬಿಜೆಪಿ ರಾಜ್ಯ ಉಪಾಧ್ಯಕ್ಷ ರೆಬಾತಿ ತಿಳಿಸಿದ್ದಾರೆ.
ಪಕ್ಷಕ್ಕೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರ ಸಭೆ ಇನ್ನೂ ಅಂತಿಮಗೊಂಡಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ನಾಬೇಂದು ಭಟ್ಟಾಚಾರ್ಜಿ ತಿಳಿಸಿದ್ದಾರೆ.