ಮಲತಾಯಿಗೂ ಮಲಮಕ್ಕಳಿಂದ ಜೀವನಾಂಶ ಕೇಳುವ ಹಕ್ಕಿದೆ; ಹೈಕೋರ್ಟ್

ಬೆಂಗಳೂರು, ಮಾರ್ಚ್ 19; ಮಲತಾಯಿ ಮಲ ಮಕ್ಕಳಿಂದ ಜೀವನಾಂಶ ಪಡೆಯುವ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ಮಲತಾಯಿ ಜೀವನಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲಕ್ಕೆ ತೆರೆ ಎಳೆದಿದೆ. ಬೆಂಗಳೂರಿನ ಖಲೀಲ್ ಉಲ್ ರೆಹಮಾನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೆ.
ಮೃತ ಪತಿಗೆ ಆಸ್ತಿ ಇದೆ ಎಂಬುದನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ಸಾಬೀತುಪಡಿಸಿ ಮಲ ತಾಯಿ, ಮಲ ಮಕ್ಕಳಿಂದ ಜೀವನಾಂಶ ಕೇಳಬಹುದಾಗಿ ಎಂದು ಹೈಕೋರ್ಟ್ ಆದೇಶ ನೀಡಿದೆ. ಕೌಟುಂಬಿಕ ನ್ಯಾಯಾಲಯ ಎರಡೂ ಪಕ್ಷಗಾರರ ಸಾಕ್ಷ್ಯವನ್ನು ದಾಖಲಿಸಬೇಕು ಮತ್ತು ಹೊಸದಾಗಿ ವಿಚಾರಣೆ ನಡೆಸಿ ದಾಖಲೆಗಳನ್ನು ಆಧರಿಸಿ ನಂತರ ತೀರ್ಮಾನಿಸಬೇಕು. ತೀರ್ಮಾನ ಕೈಗೊಳ್ಳುವಾಗ ಸುಪ್ರಿಂಕೋರ್ಟ್ ಅಪರಾಧ ದಂಡ ಸಂಹಿತೆ ಸೆಕ್ಷನ್ 125 ಮತ್ತು ಹಿರಿಯ ನಾಗರಿಕರ ಕಾಯಿದೆಯ ಅಂಶಗಳನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಮಧ್ಯಂತರ ಪರಿಹಾರಕ್ಕೆ ಆದೇಶ: ಅಲ್ಲಿಯವರೆಗೆ ಮಧ್ಯಂತರ ಪರಿಹಾರವಾಗಿ ಮೂಲ ಅರ್ಜಿದಾರರಾದ ಮಲ ಪತ್ನಿಗೆ 10 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಮಲತಾಯಿಗೆ ಪ್ರತಿ ತಿಂಗಳು 25 ಸಾವಿರ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ನ್ಯಾಯಪೀಠ ರದ್ದುಗೊಳಿಸಿದೆ. ಅಲ್ಲದೆ, ಕೌಟುಂಬಿಕ ನ್ಯಾಯಾಲಯದ ಮಧ್ಯಂತರ ಆದೇಶ ಕಾನೂನು ಪ್ರಕಾರ ಊರ್ಜಿತವಾಗುವುದಿಲ್ಲ. ನ್ಯಾಯಾಲಯ ಮತ್ತೆ ಈ ಕುರಿತು ವಿಚಾರಣೆ ನಡೆಸಬೇಕು ಮತ್ತು ಮಲತಾಯಿ ತನ್ನ ಪತಿ ಅಧಿಕ ಆಸ್ತಿಗಳನ್ನು ಹೊಂದಿದ್ದರು ಮತ್ತು ಅವರಿಗೆ ಆದಾಯವಿತ್ತು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿ ಜೀವನಾಂಶ ಕೇಳಬಹುದು ಎಂದು ಆದೇಶ ನೀಡಿದೆ.
ವ್ಯಾಖ್ಯಾನ ಪರಿಗಣನೆ: ಸಿಆರ್‌ಪಿಸಿ ಸೆಕ್ಷನ್ 125ರಡಿ ಮಲತಾಯಿ ಮಲ ಮಕ್ಕಳಿಂದ ಜೀವನಾಂಶ ಕೇಳುವ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ಹಿರಿಯ ನಾಗರಿಕರ ಕಾಯಿದೆ ಸೆಕ್ಷನ್ 9 (1)(2) ರಡಿ ಬರುವ ವ್ಯಾಖ್ಯಾನದಲ್ಲಿಪೋಷಕರು ಎಂದರೆ ಜೈವಿಕ ತಾಯಿ ಅಥವಾ ತಂದೆ ಅಥವಾ ಮಲ ತಂದೆ ಅಥವಾ ಮಲತಾಯಿ ಸೇರಿ ಅಯಾ ಪ್ರಕರಣದ ಅನುಸಾರ ಜೀವನಾಂಶವನ್ನು ಕೇಳಬಹುದಾಗಿದೆ ಎಂದು ಹೇಳಲಾಗಿದೆ. ಹಾಗಾಗಿ ಮಲ ತಾಯಿ ಮಲ ಮಕ್ಕಳಿಂದ ಜೀವನಾಂಶ ಪಡೆಯಬಹುದು, ಆದರೆ ಪತಿಗೆ ಆಸ್ತಿ ಇತ್ತು, ಅವರಿಗೆ ಆದಾಯ ಬರುತ್ತಿತ್ತು ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ವಿವರ: ಮೊಹಿದ್ದೀನಿ ಮುನಿರಿ ಅವರ ಮೊದಲ ಪತ್ನಿ ಮೃತ ಪಟ್ಟ ನಂತರ ಶಫ್ರುನ್ನೀಸಾ ಅವರನ್ನು ಮದುವೆಯಾಗಿದ್ದರು. ಆ ವೇಳೆ ತನ್ನ ಆಸ್ತಿಯಲ್ಲಿ ಪಾಲು ಕೊಡುವುದಾಗಿ ಭರವಸೆ ನೀಡಿದ್ದರು. ಮೊಹಿದ್ದೀನಿ ಅವರು ಭಟ್ಕಳದಲ್ಲಿ ಮನೆ ಹಾಗೂ ಆಸ್ತಿಯನ್ನು ಹೊಂದಿದ್ದರು. ಅವರು 1994ರಲ್ಲಿ ನಿಧನರಾದರು. ಆನಂತರ ಶ್ರಫುನ್ನಿಸಾ ತಾನು ಹಿರಿಯ ನಾಗರಿಕಳು, ಅವಿದ್ಯಾವಂತೆ ಮತ್ತು ಭಟ್ಕಳದ ಮನೆಯಿಂದ ಬರುವ 4 ಸಾವಿರ ಬಾಡಿಗೆ ಹೊರತು ಬೇರೆ ಆದಾಯವಿಲ್ಲ. ಜೊತೆಗೆ ಮಗಳಿಗೂ ವಿಚ್ಛೇಧನವಾಗಿದೆ, ಮೊಮ್ಮಗುವನ್ನು ನೋಡಿಕೊಳ್ಳಬೇಕು ಹಾಗಾಗಿ ತನ್ನ ಪತಿಯ ಮಲ ಮಕ್ಕಳಿಂದ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಅವರ ಮನವಿ ಮಾನ್ಯ ಮಾಡಿ ಮಲ ಮಗ ಖಲೀಲ್ ಉಲ್ ರೆಹಮಾನ್‌ಗೆ ಮಲ ತಾಯಿಗೆ ತಿಂಗಳಿಗೆ 25 ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಮಲ ಮಗ ಖಲೀಲ್ ಹೈಕೋರ್ಟ್ ಮೊರೆ ಹೋಗಿದ್ದರು.