ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

ಮಂಗಳೂರು: ರಾ.ಹೆ. 169 ಚತುಷ್ಪಥ ಯೋಜನೆಯಲ್ಲಿ ಭೂಸ್ವಾಧೀನ ಸರಿಯಾಗಿ ಆಗದ ಕಾರಣ ಕಾಮಗಾರಿ ನಿಧಾನವಾಗಿದ್ದು, ಇದೇ ರೀತಿ ಮುಂದುವರಿದರೆ ಗುತ್ತಿಗೆದಾರ ಕಂಪೆನಿ ದಿಲೀಪ್‌ ಬಿಲ್ಡ್‌ ಕಾನ್‌ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡುವ ಆತಂಕ ಇದೆ ಎಂದು ರಾ.

ಹೆ. ಪ್ರಾದೇಶಿಕ ಅಧಿಕಾರಿ ವಿವೇಕ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಅವರು ರಾ.ಹೆ. 169ಗೆ ಸಂಬಂಧಿಸಿದ ಭೂಮಾಲಕರ ಜತೆ ನಡೆದ ಸಭೆಯಲ್ಲಿ ಈ ವಿಚಾರ ತಿಳಿಸಿದರು. ಭೂಮಾಲಕರ ಹೋರಾಟ ಸಮಿತಿಯ ಅಧ್ಯಕ್ಷೆ ಮರಿಯಮ್ಮ ಥಾಮಸ್‌ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ನಿಧಾನಗೊಳ್ಳಲು ಭೂಸ್ವಾಧೀನಾಧಿಕಾರಿ ಕಚೇರಿ ಮತ್ತು ರಾ.ಹೆ. ಪ್ರಾಧಿಕಾರವೇ ಹೊಣೆೆ ಎಂದರು.

ಸಮಿತಿಯ ಸಂಚಾಲಕ ಪ್ರಕಾಶ್‌ಚಂದ್ರ ಮಾತನಾಡಿ, ಸಮಿತಿಯ ವತಿಯಿಂದ ಇಲಾಖೆಗೆ ಸಲ್ಲಿಸಿದ ಆಕ್ಷೇಪ ಮತ್ತು ದಾಖಲೆಗಳನ್ನು ಸರಿಯಾಗಿ ಓದದೆ ಅಸಡ್ಡೆ ಮತ್ತು ಬೇಜವಾಬ್ದಾರಿ ವರ್ತನೆಯನ್ನು ಪ್ರಾಧಿಕಾರ ತೋರ್ಪಡಿಸುತ್ತಿದೆ ಎಂದರು.

ಹೋರಾಟ ಸಮಿತಿಯ ಪ್ರಮುಖ ರತ್ನಾಕರ ಶೆಟ್ಟಿ, ಹೆದ್ದಾರಿ ಪ್ರಾಧಿಕಾರವು ಯೋಜನೆಯನ್ನು ರದ್ದು ಪಡಿಸಲು ಯೋಚಿಸುತ್ತಿರುವುದಾದರೆ ಕೂಡಲೇ ರದ್ದು ಪಡಿಸಲಿ ಎಂದರು.
ಅವೈಜ್ಞಾನಿಕವಾಗಿ ಮಾರ್ಗನಕ್ಷೆಯ ಬದಲಾವಣೆ ಮತ್ತು ಅಸುರಕ್ಷಿತ ರಸ್ತೆ ಕಾಮಗಾರಿಗಳ ಬಗ್ಗೆ ರವೀಂದ್ರನ್‌ ಗಮನ ಸೆಳೆದರು. ಸರಿಯಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳದೆ ಕಾಮಗಾರಿ ಪ್ರಾರಂಭಿಸಿರುವುದರಿಂದ ಅಪಘಾತಗಳು ಸಂಭವಿಸಿವೆ. ಸೂಕ್ತ ಸುರಕ್ಷ ಕ್ರಮ, ರಸ್ತೆ ವಿಭಜನ ಸ್ಥಳಗಳಲ್ಲಿ ಪ್ರತಿಫಲಕಗಳು, ಸೂಚನ ಫಲಕ ಅಳವಡಿಸಬೇಕು ಎಂದು ಸಾಣೂರು ನರಸಿಂಹ ಕಾಮತ್‌ ತಿಳಿಸಿದರು.

ಡಾ| ಪ್ರೇಮಲತಾ ಶೆಟ್ಟಿ ಮಾತ ನಾಡಿ, ಪರಿಹಾರ ಮೊತ್ತವನ್ನು ನಿರ್ಧರಿಸುವಾಗ ಅಕ್ಕಪಕ್ಕದ ಉಡುಪಿ ಮತ್ತು ದ. ಕನ್ನಡ ಜಿಲ್ಲೆಯಲ್ಲಿ ವ್ಯತಿರಿಕ್ತವಾದ ಮಾನದಂಡವನ್ನು ಏಕೆ ಅನುಸರಿಸಿದ್ದೀರಿ ಎಂದು ಪ್ರಶ್ನಿಸಿದರು. ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಲಿಂಗೇಗೌಡ ಹಾಜರಿದ್ದರು.

ತಿಂಗಳಲ್ಲಿ ಪರಿಹಾರ ನಿರೀಕ್ಷೆ
ಪರಿಷ್ಕೃತ ಪರಿಹಾರವನ್ನು ನೀಡುವಂತೆ ಹೈಕೋರ್ಟ್‌ ನೀಡಿರುವ ಆದೇಶದ ಅನ್ವಯ ಒಂದು ತಿಂಗಳಲ್ಲಿ ಪರಿಹಾರ ನೀಡುವುದಾಗಿ ತಿಳಿಸಿದ ಅಧಿಕಾರಿ, ರಾ.ಹೆ. ನಿರ್ಮಾಣ ವಿನ್ಯಾಸ ಕುರಿತ ಆಯಾ ಗ್ರಾಮಗಳ ನಕ್ಷೆಯನ್ನು ಪ್ರತೀ ಪಂಚಾಯತ್‌ ಕಚೇರಿಗೆ ನೀಡುವುದಕ್ಕೂ ಒಪ್ಪಿಗೆಯಿತ್ತರಲ್ಲದೆ ಈ ಬಗ್ಗೆ ಯೋಜನಾಧಿಕಾರಿಗೆ ಸೂಚಿಸಿದರು. ಪರಿಹಾರ ಮೊತ್ತದಲ್ಲಿ ಜಿಎಸ್‌ಟಿ ಮತ್ತು ಟಿಡಿಎಸ್‌ ಕಡಿತಗೊಳಿಸುತ್ತಿರುವ ಬಗ್ಗೆ ಸನತ್‌ ಕುಮಾರ್‌ ಶೆಟ್ಟಿ ಅವರ ಆಕ್ಷೇಪಕ್ಕೆ ಉತ್ತರಿಸಿ, ಯಾವುದೇ ರಾಜ್ಯದಲ್ಲಿಯೂ ಕೂಡ ಪರಿಹಾರ ಮೊತ್ತದಿಂದ ಜಿಎಸ್‌ಟಿ ಮತ್ತು ಟಿಡಿಎಸ್‌ ಕಡಿತಗೊಳಿಸುತ್ತಿಲ್ಲ. ಕರ್ನಾಟಕದಲ್ಲಿ ಈ ರೀತಿ ಯಾಕೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.