ಭೀಕರ ಪ್ರವಾಹಕ್ಕೆ ನಲುಗುತ್ತಿರುವ ಪಶ್ಚಿಮ ಯುರೋಪ್​; ಇದುವರೆಗೆ 150 ಮಂದಿ ಸಾವು, 100ಕ್ಕೂ ಹೆಚ್ಚು ಜನರು ನಾಪತ್ತೆ

ಭೀಕರ ಪ್ರವಾಹಕ್ಕೆ ನಲುಗುತ್ತಿರುವ ಪಶ್ಚಿಮ ಯುರೋಪ್​; ಇದುವರೆಗೆ 150 ಮಂದಿ ಸಾವು, 100ಕ್ಕೂ ಹೆಚ್ಚು ಜನರು ನಾಪತ್ತೆ

ಒಂದು ವಾರದಿಂದಲೂ ಜರ್ಮನಿ, ಬೆಲ್ಜಿಯಂ ಸೇರಿ ಹಲವು ಪಶ್ಚಿಮ ಯುರೋಪ್​ನ ಅನೇಕ ದೇಶಗಳು ಪ್ರವಾಹ (Flood)ದಿಂದ ತತ್ತರಿಸಿಹೋಗಿವೆ. ಈ ಪಶ್ಚಿಮ ಯುರೋಪ್​ ಪ್ರವಾಹಕ್ಕೆ ಇಲ್ಲಿಯವರೆಗೆ 150 ಜೀವಗಳು ಬಲಿಯಾಗಿದ್ದು, 100ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಒಂದೆಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರವಾಹ ಕ್ಷಣಕ್ಷಣಕ್ಕೂ ಭೀಕರವಾಗಿ ಪರಿಣಮಿಸುತ್ತಿದೆ. ಪಶ್ಚಿಮ ಯುರೋಪ್(Western Europe) ​​ನ ಪ್ರಮುಖ ದೇಶಗಳಲ್ಲಿನ ಹಲವು ಸ್ಥಳಗಳಿಗೆ ಸಂಪರ್ಕ ಕಡಿತಗೊಂಡಿದೆ. ಮನೆಗಳೆಲ್ಲ ನೀರಿನಲ್ಲಿ ತೇಲಿಹೋಗುತ್ತಿವೆ.

ಜರ್ಮನಿಯ ರಾಜ್ಯಗಳಾದ ನಾರ್ತ್ ರೈನ್​-ವೆಸ್ಟ್​ಫಾಲಿಯಾ ಮತ್ತು ರೈನ್ಲ್ಯಾಂಡ್ ಪ್ಯಾಲಟಿನೇಟ್​, ಬೆಲ್ಜಿಯಂ ಮತ್ತು ನೆದರ್​ಲ್ಯಾಂಡ್​​ಗಳ ದಕ್ಷಿಣ ಭಾಗಗಳಲ್ಲಿ ಪ್ರವಾಹ ತನ್ನ ಕರಾಳ ಮುಖ ತೋರುತ್ತಿದೆ. ಜರ್ಮನಿಯೊಂದರಲ್ಲೇ 103 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 60ವರ್ಷಗಳಲ್ಲೇ ಜರ್ಮನಿಯಲ್ಲಿ ಇದು ಅತ್ಯಂತ ದೊಡ್ಡ ಮಟ್ಟದ ನೈಸರ್ಗಿಕ ವಿಪತ್ತು ಎಂದು ಹೇಳಲಾಗಿದೆ. ಹಲವು ಏರಿಯಾಗಳಲ್ಲಿ ರಸ್ತೆ, ಮನೆಗಳೆಲ್ಲ ನೀರಿನಲ್ಲಿ ಮುಳುಗಿವೆ. ಕಾರುಗಳೆಲ್ಲ ನೀರಿನಲ್ಲಿ ತೇಲಿಸಿಕೊಂಡು ಹೋಗಿವೆ. ಮನೆಗಳಂತೂ ಒಡೆದು ಬಿದ್ದು, ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳೆಲ್ಲ ವೈರಲ್ ಆಗಿವೆ. ಅನೇಕ ಜಿಲ್ಲೆಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ವಿದ್ಯುತ್​ ವ್ಯತ್ಯಯವಾಗಿದೆ.

ನೆದರ್‌ಲ್ಯಾಂಡ್ಸ್‌ನ ಲಿಂಬರ್ಗ್ ಪ್ರಾಂತ್ಯದ ಉತ್ತರದಲ್ಲಿ ವಾಸವಾಗಿದ್ದ ಹಲವರು ಶುಕ್ರವಾರ ಮುಂಜಾನೆಯೇ ತಮ್ಮ ಮನೆಗಳನ್ನು ತೊರೆದು ಬೇರೆಕಡೆಗೆ ಹೋಗಿದ್ದಾರೆ. ಪ್ರವಾಹ ಭೀತಿಯ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅವರನ್ನೆಲ್ಲ ಸ್ಥಳಾಂತರ ಮಾಡುವ ಕಾರ್ಯ ನಡೆದಿದೆ. ರಕ್ಷಣಾ ತಂಡಗಳು ಎಡಬಿಡದೆ ಕಾರ್ಯನಿರ್ವಹಿಸುತ್ತಿವೆ. ಮ್ಯೂಸ್​ ನದಿ ಅಪಾಯಮಟ್ಟವನ್ನೂ ಮೀರಿ ಹರಿಯುತ್ತಿರುವುದು ಈ ಎಲ್ಲ ಅವಘಡಗಳಿಗೆ ಕಾರಣವಾಗಿದೆ. ಹಾಗೇ 2002ರಲ್ಲಿ ಎಲ್ಬೆ ನದಿ ಪ್ರವಾಹದಿಂದ ಪೂರ್ವ ಜರ್ಮನಿಯಲ್ಲಿ 21 ಮಂದಿ ಪ್ರಾಣ ಕಳೆದುಕೊಂಡಿದ್ದರು. ಹಾಗೇ, ಮಧ್ಯ ಯುರೋಪಿನಲ್ಲಿ ಒಟ್ಟಾರೆ 100 ಮಂದಿಯ ಪ್ರಾಣ ಹೋಗಿತ್ತು. ಇದು ಆಗಿನ ಪ್ರವಾಹವನ್ನೂ ಮೀರಿಸುವ ಹಂತ ತಲುಪಿದೆ.