ಬೆಂಗಳೂರಿನ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ

ಬೆಂಗಳೂರಿನ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ

ಬೆಂಗಳೂರು: ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಸೇನಾ ಹೆಲಿಕಾಪ್ಟರ್​​ನಲ್ಲಿ ಮುದ್ದೇನಹಳ್ಳಿಯತ್ತ ಹೊರಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹೆಚ್​ಎಎಲ್ ಏರ್‌ಪೋರ್ಟ್​​ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.

ಯುಗಾದಿ ಸಂಭ್ರಮದ ಜತೆಗೆ ಬಿಜೆಪಿ ಮತ್ತೊಂದು ಹಬ್ಬದ ಆಚರಣೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಾ.25 ರಂದು ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಮಲ ಪಡೆ ಪರವಾಗಿ ಮತಬೇಟೆಯಾಡಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೆ ಕೆಲವು ನಗರಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ್ದ ಮೋದಿ, ಶನಿವಾರ ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು, ದಾವಣಗೆರೆಗಳಲ್ಲಿ ರೋಡ್ ಶೋ ನಡೆಸುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆಯಾಗಿದೆ. ದಾವಣಗೆರೆಯ ರೋಡ್ ಶೋ ನಿಗದಿಯಾಗಿದ್ದು, ಬೆಂಗಳೂರಿನ ರೋಡ್ ಶೋಗೆ ತಡರಾತ್ರಿ ತನಕ ಪ್ರಧಾನಿ ಕಾರ್ಯಾಲಯದಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೇ ರೋಡ್ ಶೋ ಮಾಡಲಿದ್ದಾರೆ.

ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಗೆ ತೆರಳುವ ಮೋದಿ, ಸರ್ ಎಂ. ವಿಶ್ವೇಶ್ವರಯ್ಯ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ, ಅಲ್ಲಿರುವ ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡುವರು. ಆ ನಂತರ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಶೋಧನಾ ಕೇಂದ್ರ ಉದ್ಘಾಟಿಸುವರು. ಮಧ್ಯಾಹ್ನ 1ಕ್ಕೆ ಬೆಂಗಳೂರಿನ ವೈಟ್​ಫೀಲ್ಡ್​ಗೆ ಆಗಮಿಸುವ ಪ್ರಧಾನಿ, ಮೆಟ್ರೋ ಮಾರ್ಗ ಲೋಕಾರ್ಪಣೆ ಮಾಡಿ ಮೆಟ್ರೋದಲ್ಲಿ ಸಂಚರಿಸುವರು. ಮಧ್ಯಾಹ್ನ 3.20ಕ್ಕೆ ದಾವಣಗೆರೆಗೆ ತೆರಳಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪದ ಮಹಾ ಸಂಗಮದಲ್ಲಿ ಭಾಗವಹಿಸುವರು. ಕಾರ್ಯಕ್ರಮ ಮುಗಿದ ನಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸಾಗುವರು.