ಪುಟಿನ್- ಜಿನ್‌ಪಿಂಗ್ ಮಾತುಕತೆ: ಉಕ್ರೇನ್ ಮೇಲೆ ಭಾರಿ ದಾಳಿಗೆ ಸಿದ್ಧತೆ

ಕೀವ್: ಉಕ್ರೇನ್ ಮೇಲೆ ಹತ್ತು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾಕ್ಕೆ ಆಗಿರುವ ಹಿನ್ನಡೆ ಸರಿದೂಗಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ವ್ಲಾಡಿಮಿರ್ ಪುಟಿನ್ ಮತ್ತು ಷಿ ಜಿನ್‌ಪಿಂಗ್ ಶುಕ್ರವಾರ ಪ್ರತಿಜ್ಞೆ ಮಾಡಿದರು.
ಇದರ ಬೆನ್ನಲ್ಲೇ ಉಕ್ರೇನ್ ಮೇಲೆ ಮತ್ತೊಂದು ಸುತ್ತಿನ ಭಾರಿ ಕ್ಷಿಪಣಿ, ಬಾಂಬ್ ಹಾಗೂ ಡ್ರೋನ್‌ಗಳ ದಾಳಿ ರಷ್ಯಾ ಪಡೆಗಳಿಂದ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಪುಟಿನ್ ಮತ್ತು ಜಿನ್‌ಪಿಂಗ್ ಅವರು ವರ್ಚುವಲ್ ಮೂಲಕ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಮಾತುಕತೆಯಲ್ಲಿ ಉಕ್ರೇನ್ ಯುದ್ಧದ ಬಗ್ಗೆ ನೇರ ಉಲ್ಲೇಖ ಮಾಡಲಿಲ್ಲ. ಆದರೆ, ಉಭಯ ರಾಷ್ಟ್ರಗಳು ವ್ಯಾಖ್ಯಾನಿಸುತ್ತಿರುವ 'ಭೌಗೋಳಿಕ ರಾಜಕೀಯ ಉದ್ವಿಗ್ನತೆ' ಮತ್ತು 'ಅಂತರರಾಷ್ಟ್ರೀಯ ಕಠಿಣ ಪರಿಸ್ಥಿತಿ' ವೇಳೆ ದ್ವಿಪಕ್ಷೀಯ ಸಹಕಾರ ವೃದ್ಧಿಯ ಪ್ರತಿಜ್ಞೆ ಮತ್ತು ಸಂಬಂಧ ಬಲಪಡಿಸುವಿಕೆ ತೀರ್ಮಾನವನ್ನು ಉಭಯ ನಾಯಕರು ಪ್ರಶಂಸಿಸಿದರು.
'ಉಲ್ಬಣಿಸುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ರಷ್ಯಾ- ಚೀನಾ ಕಾರ್ಯತಂತ್ರದ ಸಹಭಾಗಿತ್ವವು ಸ್ಥಿರವಾಗಿ ಬೆಳೆಯುತ್ತಿರುವುದು ಮಹತ್ವದ್ಧಾಗಿದೆ' ಎಂದು ಪುಟಿನ್ ಬಣ್ಣಿಸಿದರು.
ಜಿನ್‌ಪಿಂಗ್ ಜತೆಗಿನ ವರ್ಚುವಲ್ ಮಾತುಕತೆಯಲ್ಲಿ ಪುಟಿನ್, ಸೇನೆಗಳ ಸಹಕಾರವು ನಮ್ಮ ನಡುವಿನ ಸಂಬಂಧದಲ್ಲಿ 'ವಿಶೇಷ ಸ್ಥಾನ' ಹೊಂದಿದೆ. ಉಭಯ ರಾಷ್ಟ್ರಗಳ ಸಶಸ್ತ್ರ ಪಡೆಗಳ ನಡುವಿನ ಸಹಕಾರ ಬಲಪಡಿಸುವ ಗುರಿಯನ್ನು ರಷ್ಯಾ ಹೊಂದಿದೆ. ನಮ್ಮ ಸ್ನೇಹದ ವಿಚಾರದಲ್ಲಿ ಚೀನಾಕ್ಕೆ ಯಾವುದೇ ಮಿತಿ ಇರುವುದಿಲ್ಲ' ಎಂದು ಹೇಳಿದರು.
'ಕಠಿಣ ಮತ್ತು ನೇರ ಅಂತರರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಷ್ಯಾ ಜತೆಗಿನ ಕಾರ್ಯತಂತ್ರದ ಸಹಭಾಗಿತ್ವ ಹೆಚ್ಚಿಸಲು ಬೀಜಿಂಗ್ ಸಿದ್ಧವಾಗಿದೆ. ಉಭಯ ದೇಶಗಳ ಜನರ ಅನುಕೂಲಕ್ಕಾಗಿ, ಪರಸ್ಪರ ಅಭಿವೃದ್ಧಿ ಅವಕಾಶಗಳನ್ನು ಒದಗಿಸಲು, ವಿಶ್ವದಾದ್ಯಂತ ಸ್ಥಿರತೆ ಕಾಯುವ ಹಿತದೃಷ್ಟಿಯಿಂದ ಜಾಗತಿಕ ಪಾಲುದಾರಿಕೆ ವಹಿಸಲಿದ್ದೇವೆ' ಎಂದು ಷಿ ಜಿನ್‌ಪಿಂಗ್ ಹೇಳಿದರು.
ವಸಂತ ಋತುವಿನ ವೇಳೆಗೆ ಚೀನಾಕ್ಕೆ ಭೇಟಿ ನೀಡುವಂತೆ ಪುಟಿನ್ ಅವರಿಗೆ ಷಿ ಜಿನ್‌ಪಿಂಗ್ ಆಹ್ವಾನ ನೀಡಿದರು.
ತೈವಾನ್ ತನ್ನದೆಂದು ಹಕ್ಕು ಚಲಾಯಿಸುತ್ತಿರುವ ಚೀನಾಕ್ಕೆ ಅಮೆರಿಕ ಜತೆಗಿನ ಸಂಬಂಧ ಹದಗೆಟ್ಟಿದೆ. ತೈವಾನ್ ದ್ವೀಪದ ಸುತ್ತ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಚೀನಾಕ್ಕೆ ರಷ್ಯಾ ಬಲವಾದ ಬೆಂಬಲ ನೀಡಿದೆ.
ಉಕ್ರೇನ್ ಮೇಲೆ ಆಕ್ರಮಣ ಆರಂಭವಾದಾಗಿನಿಂದ ಮಾಸ್ಕೊ ಮತ್ತು ಬೀಜಿಂಗ್ ನಡುವೆ ಸಂಬಂಧಗಳು ಬಲವಾಗಿ ಬೆಳೆದಿವೆ. ಕಳೆದ ವಾರವಷ್ಟೇ, ಉಭಯ ರಾಷ್ಟ್ರಗಳ ಸೇನಾ ಪಡೆಗಳು ಪೂರ್ವ ಚೀನಾ ಸಮುದ್ರದಲ್ಲಿ ಜಂಟಿ ನೌಕಾ ತಾಲೀಮು ನಡೆಸಿದವು.