ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸಾರವರ್ಧಿತ ಅಕ್ಕಿ ವಿತರಣೆ

ಧಾರವಾಡ : ದಿನನಿತ್ಯದ ಆಹಾರದಲ್ಲಿ ಸಂಪೂರ್ಣ ಪೋಷಕಾಂಶಗಳು ಲಭ್ಯವಾಗದೇ ಇರುವ ಕಾರಣದಿಂದಾಗಿ, ಅಶಕ್ತತೆ (ಅನೀಮಿಯ), ಇರುಳು ಕುರುಡುತನ ಅಂತಹ ರೋಗಗಳು ಬರಬಹುದಾಗಿದೆ. ಅಲ್ಲದೇ ಹೆಚ್ಚಾಗಿ ಮಹಿಳೆಯರು ಹಾಗೂ ಮಕ್ಕಳು ಅಪೌಷ್ಠಿಕತೆಗೆ ಬಲಿಯಾಗುತ್ತಾರೆ.
ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ, ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಸಾರ್ವಜನಿಕ ವಿತರಣಾ ಪದ್ಧತಿಯ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುವ ಪ್ರತಿ 50 ಕೆ.ಜಿ. ಅಕ್ಕಿಯ ಚೀಲದಲ್ಲಿ ಅರ್ಧ ಕೆ.ಜಿ.ಯಷ್ಟು ಪೋಷಕಾಂಶ (ವಿಟಾಮಿನ್ ಎ ಮತ್ತು ಡಿ, ಐರನ್, ಫೋಲಿಕ್ ಆಸಿಡ್, ಬಿಕಾಂಪ್ಲೇಕ್ಸ, ಜಿಂಕ್ ಹಾಗೂ ಐಯೋಡಿನ್) ಭರಿತ ಸಾರವರ್ಧಿತ ಅಕ್ಕಿಯನ್ನು ಬೆರೆಸಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.
ಸಾರವರ್ಧಿತಗೊಳಿಸಿರುವ (ಪೋರ್ಟಿಫೈಡ್) ಅಕ್ಕಿಯಲ್ಲಿ ಕೆಲವೊಂದು ಅಕ್ಕಿಯ ಕಾಳುಗಳು ಹೊಳಪಿನಿಂದ ನೋಡಲು ಪ್ಲಾಸ್ಟಿಕ್ ರೀತಿಯಲ್ಲಿ ಕಾಣಿಸುತ್ತಿದ್ದು, ಸಾರ್ವಜನಿಕರು ಆತಂಕಗೊಳ್ಳಬಾರದು. ವಿತರಣೆ ಮಾಡಲಾಗುತ್ತಿರುವ ಸಾರವರ್ಧಿತ ಅಕ್ಕಿಯನ್ನು ಉಪಯೋಗಿಸಿ, ಆರೋಗ್ಯವಂತರಾಗಲು ಕೋರಿದೆ.
ಸಾರ್ವಜನಿಕ ವಿತರಣಾ ಪದ್ಧತಿಯಡಿ ಬಿಡುಗಡೆ ಮಾಡುವ ಅಕ್ಕಿಯನ್ನು ಸ್ವಂತಕ್ಕೆ ಉಪಯೋಗಿಸತಕ್ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹ ಕುಟುಂಬಕ್ಕೆ ನೀಡಿದ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದೆಂದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.