ನೇಕಾರರ ಸಮಗ್ರ ಅಭಿವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ಮತ್ತಷ್ಟು ಯೋಜನೆ : ಸಿಎಂ ಬೊಮ್ಮಾಯಿ ಘೋಷಣೆ

ನೇಕಾರರ ಸಮಗ್ರ ಅಭಿವೃದ್ಧಿಗೆ ಮುಂದಿನ ಬಜೆಟ್ ನಲ್ಲಿ ಮತ್ತಷ್ಟು ಯೋಜನೆ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ಮುಂಬರುವ ಬಜೆಟ್ ನಲ್ಲಿ ನೇಕಾರರಿಗೆ ಇನ್ನಷ್ಟು ಬೆಂಬಲ ನೀಡಲು, ಕಚ್ಚಾ ವಸ್ತುವಿನಿಂದ ಹಿಡಿದು, ತಂತ್ರಜ್ಞಾನ ಅಭಿವೃದ್ಧಿಯವರಿಗೆ ಸಹಾಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕರ್ನಾಟಕ ರಾಜ್ಯ ತೊಗಟವೀರ ಕ್ಷತ್ರಿಯ ನೇಕಾರ ಸಂಘದ ವತಿಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿರುವ ಸಂಘದ 'ಅಮೃತ ಮಹೋತ್ಸವ 2023' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಯಕ, ಕರ್ತವ್ಯನಿಷ್ಠ, ಸಮಾಜಕ್ಕೆ ಮಾರ್ಯಾದೆ ತುಂಬುವ ಸಮಾಜ ನೇಕಾರರ ಸಮಾಜ.

ಮಾನವನಿಗೆ ಗೌರವ ಕೊಡುವ ನೇಕಾರ, ಅನ್ನ ನೀಡುವ ರೈತ ಕುಲ ಅನಾದಿ ಕಾಲದಿಂದ ಮನುಷ್ಯನನ್ನು ರಕ್ಷಿಸಿಕೊಂಡು ಬಂದಿವೆ. ನೇಕಾರರ ಮೂಲ ವೃತ್ತಿ ಉಳಿಯಬೇಕು ಬೆಳೆಯಬೇಕು. ಅದರ ಜೊತೆಗೆ ನೇಕಾರರು ಬೆಳೆಯಬೇಕು ಅವರ ಮಕ್ಕಳು ಬೇರೆ ಬೇರೆ ವೃತ್ತಿಗೆ ಹೋಗಬೇಕು. 1990 ರ ನಂತರ ಜಾಗತಿಕರಣ ಆದ ಮೇಲೆ ನೇಕಾರರ ವೃತ್ತಿ ಗೆ ಹೊಡೆತ ಬಿದ್ದಿದೆ. ಅದಕ್ಕೆ ನೇಕಾರರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ದೊರೆತಾಗ ಮಾತ್ರ ನೇಕಾರರು ಬೆಳೆಯಲು ಸಾಧ್ಯ. ಪಾಲಿಯಸ್ಟರ್ ಬಟ್ಟೆಗಳ ಉತ್ಪಾದನೆಯಾಗುತ್ತಿದ್ದಂತೆ ಮೂಲ ನೇಕಾರಿಕೆಗೆ ತೊಂದರೆಯಾಗಿದೆ. ಸರ್ಕಾರಗಳು ಹಲವಾರು ಸಂದರ್ಭಗಳಲ್ಲಿ ಸಹಾಯ ಮಾಡಿವೆ. ಶಾಶ್ವತವಾಗಿ ಸಹಾಯವಾಗಲು ನೇಕಾರರ ಬಟ್ಟೆಗಳಿಗೆ ನಿರಂತರವಾಗಿ ಮಾರುಕಟ್ಟೆ ದೊರೆಯಬೇಕು ಎಂದರು.

ನೇಕಾರರು ಉತ್ಪಾದಿಸುವ ಅಷ್ಟೂ ಬಟ್ಟೆಯನ್ನು ಖರೀದಿಸಲು ಆದೇಶ

ಹಿಂದೆ ನಮ್ಮ ತಂದೆ ಕೈಗಾರಿಕಾ ಸಚಿವರಾಗಿದ್ದ ಸಂದರ್ಭದಲ್ಲಿ ಜನತಾ ಧೋತಿ, ಸಮವಸ್ತ್ರ, ಸೀರೆ ನೀಡುವ ಕಾರ್ಯಕ್ರಮ ರೂಪಿಸಿದ್ದರು. ಮೈಮುಚ್ಚಿಕೊಳ್ಳಲು ಸಾಧ್ಯವಿಲ್ಲದ ಬಡವರಿಗೆ ಗೌರವ ನ್ಯೂಡುವ ಕೆಲಸ ಮಾಡುತ್ತಿದ್ದೇವೆ. ನೇಕಾರರಿಂದ ನೆಯಿಸಿ ಬಡವಾಯಿಗೆ ನೀಡಿದರೆ ನೇಕಾರರೂ ಉಳಿದು ಬಡವರ ಗೌರವವೂ ಉಳಿಯಲಿದೆ ಎಂದಿದ್ದರು. ಅದೇ ತತ್ವ ಆಧರಿಸಿ ನಾವು ಶಾಲಾ ಮಕ್ಕಳಿಗೆ ಸಮವಸ್ತ್ರ ಒದಗಿಸುತ್ತಿದ್ದು,
ನೇಕಾರರ ಮಂಡಳಿಯಿಂದ ಪಡೆಯಲು ತೀರ್ಮಾನ ಮಾಡಲಾಗಿದೆ. ಪ್ರತಿ ವರ್ಷ ನೇಕಾರರು ಉತ್ಪಾದಿಸುವ ಅಷ್ಟೂ ಬಟ್ಟೆಯನ್ನು ಖರೀದಿಸಲು ಆದೇಶ ನೀಡಲಾಗಿದೆ. ಆರು ತಿಂಗಳು ಮೊದಲೇ ನೇಕಾರರಿಗೆ ಆದೇಶ ನೀಡಲು ಸೂಚಿಸಿದ್ದೇನೆ ಎಂದರು.

ಎಲ್ಲಾ ಬೇಡಿಕೆಗಳ ಈಡೇರಿಕೆ

ನೇಕಾರರೊಂದಿಗೆ ಈವರೆಗೆ ಎರಡು ಸಭೆಗಳು ಜರುಗಿದ್ದು ಕೈಮಗ್ಗ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಅನುದಾನ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಒಪ್ಪಿ 5 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ನೇಕಾರರಿಗೆ ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಮತ್ತೊಂದು ಸಭೆಯಲ್ಲಿ ಸಲ್ಲಿಸಿದ ಎಲ್ಲಾ ಬೇಡಿಕೆಗಳನ್ನು ನಾವು ಈಡೇರಿಸಿದ್ದೇವೆ‌. ನೇಕಾರರನ್ನು ಉಳಿಸಬೇಕೆಂಬ ಪ್ರಬಲ ಭಾವನೆ ಹೃದಯದಲ್ಲಿದೆ. ಈ ಕುಲಕಸುಬುಗಳು ಕಂಬಾರರು, ಕುಂಬಾರರರು, ಬಡಿಗೇರರು, ವಿಶ್ವಕರ್ಮರು ಇವರನ್ನು ಉಳಿಸಿದಾಗ ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಅಭಿವೃದ್ಧಿ ಯಾಗುತ್ತದೆ. ದುಡಿಯುವ ವರ್ಗಕ್ಕೆ ಶಕ್ತಿಯನ್ನು ತುಂಬಿದಾಗ ಮಾತ್ರ ದೇಶವನ್ನು ಉಳಿಸಲು ಸಾಧ್ಯ. ದೊಡ್ಡ ಪ್ರಮಾಣದಲ್ಲಿ ಕಾರ್ಖಾನೆಗಳಿಂದ ಉತ್ಪಾದನೆ ಅಗತ್ಯವಿಲ್ಲ. ಆದರೆ ದೊಡ್ಡ ಪ್ರಮಾಣದ ಜನರಿಂದ ಉತ್ಪಾದನೆಯಾಗಬೇಕು. ಎಲ್ಲರ ಕೈಗೆ ಕೆಲಸ ಸಿಗಬೇಕು ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು ಎಂದರು.