ನೆಲಮಂಗಲ ಕಾಂಗ್ರೆಸ್​​ ಟಿಕೆಟ್​​ ಆಕಾಂಕ್ಷಿ ಮೇಲೆ ಹಣದ ಸುರಿಮಳೆಗೈದ ಜನ!

ನೆಲಮಂಗಲ ಕಾಂಗ್ರೆಸ್​​ ಟಿಕೆಟ್​​ ಆಕಾಂಕ್ಷಿ ಮೇಲೆ ಹಣದ ಸುರಿಮಳೆಗೈದ ಜನ!

ನೆಲಮಂಗಲ: ಮತದಾರರನ್ನು ಸೆಳೆಯಲು ರಾಜಕಾರಣಿಗಳು ನಾನಾ ರೀತಿಯ ಕಸರತ್ತು ಮಾಡೋದು ಸಹಜ. ಅದ್ರಲ್ಲೂ ಚುನಾವಣೆ ಹತ್ತಿರ ಬಂತದ್ರೆ ಸಾಕು, ಎಲ್ಲಾ ಕಡೆಗಳಲ್ಲೂ ಗಿಫ್ಟ್​ ಪಾಲಿಟಿಕ್ಸ್​ನದ್ದೇ ಸುದ್ದಿ. ಇದೀಗ ಟಿಕೆಟ್​ ಆಕಾಂಕ್ಷಿ ಶ್ರೀನಿವಾಸ್​​ ಕಾಂಗ್ರೆಸ್​​ನಿಂದ ಟಿಕೆಟ್​ ಪಡೆಯುವ ಸಲುವಾಗಿ ವಿವಿಧ ಆಮಿಷದ ಗಿಮಿಕ್ ಮಾಡಲು ಮುಂದಾಗಿದ್ದಾರೆ.

ಈ ಬಾರಿ ನೆಲಮಂಗಲ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀನಿವಾಸ್​ ಕಳೆದ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಆಗ ವೇದಿಕೆಯಲ್ಲಿದ್ದ ಸ್ಥಳೀಯರು ಶ್ರೀನಿವಾಸ್​ ಮೇಲೆ ಗರಿಗರಿ ನೋಟಿನ ಮಳೆ ಸುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಾರ್ವಜನಿಕರು ಸ್ಥಳೀಯರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮರುದಿನ ಬೆಳಗ್ಗೆ ಶ್ರೀನಿವಾಸ್​ ಹಬ್ಬದ ಉಡುಗೊರೆಯ ನೆಪದಲ್ಲಿ ತಾಲೂಕಿನಲ್ಲಿ ಜನರಿಗೆ ಕುಕ್ಕರ್​​ ಹಂಚಿದ್ದು, ತಾಲೂಕಿನ ಜನರು ಕುಕ್ಕರ್​ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದ ಘಟನೆ ನಡೆದಿದೆ. ಚುನಾವಣೆಗೂ ಮುನ್ನವೇ ಆಕಾಂಕ್ಷಿಯ ಗಿಮಿಕ್​ ಪ್ರಚಾರ ಕಂಡು ಟೀಕೆಗಳು ಕೇಳಿಬರುತ್ತಿವೆ.