ತೆಲಂಗಾಣ ಶಾಸಕರ ಖರೀದಿ ಪ್ರಕರಣ: ಬಿ.ಎಲ್. ಸಂತೋಷ್‌ಗೆ ಎರಡನೇ ನೋಟಿಸ್

ತೆಲಂಗಾಣ ಶಾಸಕರ ಖರೀದಿ ಪ್ರಕರಣ: ಬಿ.ಎಲ್. ಸಂತೋಷ್‌ಗೆ ಎರಡನೇ ನೋಟಿಸ್

ಬೆಂಗಳೂರು, ನವೆಂಬರ್ 25: ತೆಲಂಗಾಣ ರಾಷ್ಟ್ರೀಯ ಸಮಿತಿ ಶಾಸಕರನ್ನು ಖರೀದಿಸಲು ಯತ್ನಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್‌ಗೆ ಎರಡನೇ ಬಾರಿ ನೋಟಿಸ್ ಜಾರಿಗೊಳಿಸಿದೆ.

ಗುರುವಾರ ನೀಡಿರುವ ಎರಡನೇ ನೋಟಿಸ್ ನಲ್ಲಿ ಬಿಎಲ್ ಸಂತೋಷ್ ಜೊತೆಗೆ ಇನ್ನೂ ಮೂವರು ಆರೋಪಿಗಳನ್ನು ಎಸ್‌ಐಟಿ ತಂಡವು ಉಲ್ಲೇಖಿಸಿದೆ. ಕೇರಳದ ಜಗ್ಗು ಸ್ವಾಮಿ, ತುಷಾರ್ ವೆಳ್ಳಾಪಳ್ಳಿ ಹಾಗೂ ಬಿ ಶ್ರೀನಿವಾಸ್ ಎಂಬುವವರನ್ನು ನೋಟಿಸ್ ನಲ್ಲಿ ಹೆಸರಿಸಲಾಗಿದೆ. ಇದುವರೆಗೂ ನಡೆಸಿರುವ ವಿಚಾರಣೆಗೆ ಸಂಬಂದಿಸಿದಂತೆ ತನಿಖಾ ವರದಿಯನ್ನು ಎಸ್‌ಐಟಿ ತಂಡವು ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ತೆಲಂಗಾಣ ಹೈಕೋರ್ಟ್ ಆದೇಶದ ಮೇಲೆ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ತಂಡವು ಈ ಮೊದಲೇ ಬಿಎಲ್ ಸಂತೋಷ್‌ಗೆ ನೋಟಿಸ್ ನೀಡಿತ್ತು. ಆದರೆ ಇದುವರೆಗೂ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮತ್ತೊಮ್ಮೆ ನೋಟಿಸ್ ಜಾರಿಗೊಳಿಸುವಂತೆ ಬುಧವಾರ ಕೋರ್ಟ್ ಸೂಚನೆ ನೀಡಿತ್ತು. ಇದರ ಮಧ್ಯೆ ತನಿಖಾ ತಂಡದ ಎದುರು ಹಾಜರಾದ ಆರೋಪಿ ಬಿ ಶ್ರೀನಿವಾಸ್ ಅನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ.

ನ.26 ಅಥವಾ ನ.28ರಂದು ವಿಚಾರಣೆಗೆ ಹಾಜರಾಗಲು ಸೂಚನೆ:

ಎಸ್‌ಐಟಿ ತಂಡವು ನೀಡಿರುವ ಎರಡನೇ ನೋಟಿಸ್ ನಲ್ಲಿ ನವೆಂಬರ್ 26 ಅಥವಾ ನವೆಂಬರ್ 28ರಂದು ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈ ಹಿಂದೆ ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಬಿಎಲ್ ಸಂತೋಷ್ ಹಾಗೂ ಕೇರಳದ ಮತ್ತಿಬ್ಬರು ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಈ ಇಬ್ಬರು ವಿಚಾರಣೆಗೆ ಹಾಜರಾಗಿರಲಿಲ್ಲ.

ನವೆಂಬರ್ 21 ರಂದು ಹೈದರಾಬಾದ್‌ನಲ್ಲಿ ತನ್ನ ಮುಂದೆ ಹಾಜರಾಗುವಂತೆ ಎಸ್‌ಐಟಿ ತನ್ನ ನೋಟಿಸ್‌ನಲ್ಲಿ ಬಿಎಲ್‌ ಸಂತೋಷ್‌ಗೆ ತಿಳಿಸಿದೆ. ಒಂದು ವೇಳೆ ಅವರು ಹಾಜರಾಗಲು ವಿಫಲವಾದರೆ ಅವರನ್ನು ಬಂಧಿಸಲಾಗುವುದು ಎಂದು ಅದು ಹೇಳಿದೆ. ಕಳೆದ ತಿಂಗಳು ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದ ಮೂವರು ಬಿಜೆಪಿ ಏಜೆಂಟ್‌ಗಳ ನಡುವಿನ ಸಂಭಾಷಣೆಯಲ್ಲಿ ಬಿಎಲ್‌ ಸಂತೋಷ್ ಹೆಸರು ಕಾಣಿಸಿಕೊಂಡಿತ್ತು.