ತಮಿಳುನಾಡು ಬೇಟೆಗಾರರು ಹಾಗೂ ಕರ್ನಾಟಕ ಅರಣ್ಯ ಇಲಾಖೆಯವರ ಮಧ್ಯೆ ಗುಂಡಿನ ಚಕಮಕಿ; ಒಬ್ಬ ಸಾವು!

ಚಾಮರಾಜನಗರ: ತಮಿಳುನಾಡು ಗಡಿಭಾಗದಲ್ಲಿ ವೀರಪ್ಪನ್ ಕಾಲದಿಂದಲೂ ಅರಣ್ಯ ಇಲಾಖೆಯವರು ಹಾಗೂ ಕಾಡುಗಳ್ಳರ ನಡುವಿನ ಸಂಘರ್ಷ ನಡೆಯುತ್ತಿದ್ದು, ಇದೀಗ ಅಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
ಕರ್ನಾಟಕ-ತಮಿಳುನಾಡು ಗಡಿಭಾಗದ ಕಾವೇರಿ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ವಲಯದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದ್ದು, ಶವವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡಿನ ಬೇಟೆಗಾರರು ಅಕ್ರಮವಾಗಿ ಅರಣ್ಯಕ್ಕೆ ಪ್ರವೇಶ ಮಾಡಿ ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಬಂದಿದ್ದರು. ಅದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಗಮನಿಸಿದಾಗ ಅತ್ತ ಕಡೆಯಿಂದ ಬೇಟೆಗಾರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಅರಣ್ಯ ಇಲಾಖೆಯವರೂ ಗುಂಡಿನ ದಾಳಿ ನಡೆಸಿದ್ದಾರೆ.
ಕಾವೇರಿ ನದಿಯಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಈ ಗುಂಡಿನ ದಾಳಿಯಲ್ಲಿ ಬೇಟೆಗಾರನೊಬ್ಬ ಸಾವಿಗೀಡಾಗಿರಬಹುದು ಎಂಬ ಶಂಕೆ ಮೂಡಿದೆ. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಡೆಯಿಂದ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗುಂಡಿನ ದಾಳಿ ವೇಳೆ ಅದೃಷ್ಟವಶಾತ್ ಅರಣ್ಯ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.