ಜನಸ್ನೇಹಿ ಬಜೆಟ್ ಎಂಬುದು ಸಾಬೀತಾಗಿದೆ - ಸಚಿವ ಕೆ.ಗೋಪಾಲಯ್ಯ

ಬೆಂಗಳೂರು: 2023-24ನೇ ಬಜೆಟ್ ಅನ್ನು ಜನಸ್ನೇಹಿ ಬಜೆಟ್ ಎಂಬುದು ಸಾಬೀತಾಗಿದೆ ಎಂದು ಅಬಕಾರಿ ಸಚಿವರಾದ ಕೆ ಗೋಪಾಲಯ್ಯನವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡವರ ಮಕ್ಕಳಿಗೆ ನಿಗಮಗಳ ಮೂಲಕ ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಉದ್ಯೋಗ ಸೃಷ್ಟಿಗೆ ಅನುಕೂಲ ಕಲ್ಪಿಸಿದೆ.
ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ಪಾಸ್ ಸೌಲಭ್ಯ, ನಿರುದ್ಯೋಗಿಗಳಿಗೆ 2,000 ರೂ. ಮಾಶಾಸನ ನೀಡುವ ಯೋಜನೆಗಳು ಕಾರ್ಮಿಕರು ಮತ್ತು ಮಹಿಳಾ ಕಾರ್ಮಿಕರಿಗೆ 500 ರೂ. ಮಾಶಾಸನ, ರೈತರ ಪರವಾಗಿ ʼಭೂ ಸಿರಿ' ಯೋಜನೆ, ಕ್ರಮಗಳನ್ನು ಈ ಮುಂಗಡ ಪತ್ರದಲ್ಲಿ ಘೋಷಿಸಲಾಗಿದೆ. ನೇಕಾರರು ಮತ್ತು ಇತರ ಉದ್ಯಮಿಗಳಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸುವುದು ಅವರೆಲ್ಲರ ಬದುಕಿನಲ್ಲಿ ಅತ್ಯಂತ ಗುಣಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ತಿಳಿಸಿದರು.
ಇಂದು ಮಂಡಿಸಲಾಗಿರುವ ಕರ್ನಾಟಕ ಸರ್ಕಾರದ ಮುಂಗಡ ಪತ್ರ ರೈತರು, ಮಹಿಳೆಯರು ಮತ್ತು ಎಲ್ಲಾ ವರ್ಗದ ಜನರ ಹಿತಕಾಯುವ ಜನಪರ ಜನಸ್ನೇಹಿ ಮುಂಗಡಪತ್ರವಾಗಿದ್ದು, ಸಾಮಾಜಿಕ ನ್ಯಾಯ ಒದಗಿಸುವ ಭಾರತೀಯ ಜನತಾ ಪಾರ್ಟಿಯ ಬದ್ದತೆಯ ದಿಗ್ವಿಜಯವನ್ನು ಮುಂದುವರೆಸಿದ ಅರ್ಥವ್ಯವಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಪ್ರಗತಿಪರ ಮುಂದಾಲೋಚನೆಯ ಬಜೆಟ್ ಆಗಿದೆ ಎಂದರು.
ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುವ ಐತಿಹಾಸಿಕ ಕ್ರಾಂತಿಕಾರಕ ಕ್ರಮವು ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಒದಗಿಸುವ ಮೊದಲ ರಾಜ್ಯ ಸರ್ಕಾರವಾಗಿದೆ. ವಿದ್ಯಾದಾನವನ್ನು ಕಲ್ಪನೆಯನ್ನು ನೈಜ ರೂಪದಲ್ಲಿ ಅನ್ವರ್ಥಕಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಮುಂಗಡ ಪತ್ರದ ಅನುಷ್ಟಾನದಿಂದ ಉದ್ಯೋಗ ಸೃಷ್ಟಿ ಸಮಾನತೆಯ ಕಲ್ಪನೆಗಳನ್ನು ನೈಜ ರೂಪದಲ್ಲಿಯ ಅನುಷ್ಟಾನ ಜನರ ಬದುಕಿನಲ್ಲಿ ಗುಣಾತ್ಮಕವಾದ ಬದಲಾವಣೆ ಮತ್ತು ಸಮಗ್ರ ಅಭಿವೃದ್ಧಿಯ ಚಿಂತನೆಗಳನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಚಿಕಿತ್ಸಕ ಬುದ್ದಿಯಿಂದ ವಿನ್ಯಾಸಗೊಳಿಸಿರುವ 2023-24ನೇ ಸಾಲಿನ ದೂರದೃಷ್ಟಿ ಮುಂಗಡ ಪತ್ರ ಮಂಡಿಸಿದ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಹೇಳಿದರು.