ಚುನಾವಣೆ ಮುಂದಿರುವಾಗಲೇ ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ: ಎರಡು ದಿನಗಳ ಬಳಿಕ ನೋಡಿ ಎಂದದ್ದೇಕೆ ಬಿಎಸ್‌ವೈ?

ಶಿವಮೊಗ್ಗ, ಡಿಸೆಂಬರ್ 07: ಕರ್ನಾಟಕ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದೆ. ಈ ವೇಳೆಯಲ್ಲಿ ಬಿಜೆಪಿವು ಪಕ್ಷವು ತನ್ನದೇ ಶಾಸಕರಿಂದ ಒತ್ತಡಕ್ಕೆ ಒಳಗಾಗಿದೆ. ಆರೋಪ ಹೊತ್ತುಕೊಂಡು ಸಚಿವ ಸ್ಥಾನಗಳಿಂದ ಕೆಳಗಿಳಿದಿದ್ದ ಇಬ್ಬರು ಪ್ರಭಾವಿ ಶಾಸಕರು ಮತ್ತೆ ಸಚಿವ ಸಂಪುಟ ಸೇರಲು ಒತ್ತಡ ಹೇರುತ್ತಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ
ಈ ವಿಚಾರದ ಕುರಿತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಎರಡು ದಿನಗಳಲ್ಲಿ ತೀರ್ಮಾನವಾಗಲಿದೆ. ಈ ನಿರ್ಧಾರವನ್ನು ಕೇಂದ್ರದ ನಾಯಕರು ತೆಗೆದುಕೊಳ್ಳಲಿದ್ದಾರೆ' ಎಂದು ತಿಳಿಸಿದರು.
ಶಿಕಾರಿಪುರದಲ್ಲಿ ಬಿಜೆಪಿ ಬೂತ್ ವಿಜಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
'ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಕುರಿತು ತೀರ್ಮಾನ ಮಾಡಲಿದ್ದಾರೆ' ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಯಡಿಯೂರಪ್ಪ ಹರಿಹಾಯ್ದರು. 'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ತಾವೇ ಮುಖ್ಯಮಂತ್ರಿ ಎಂದು ಕಾದಾಡುತ್ತಿದ್ದಾರೆ. ಅವರದ್ದು ಕೇವಲ ತಿರುಕನ ಕನಸು. ಇದು ಅವರಿಗೂ ಮನವರಿಕೆ ಆಗಬೇಕಿದೆ. ನಾವು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಜಯಬೇರಿ ಬಾರಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ತಿಳಿಸಿದ್ದಾರೆ
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಎಸ್‌ವೈ, 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬೇರೆಯವರ ಬಗ್ಗೆ ಹಗುರವಾಗಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ತಾವು ನಿಂತಿರುವ ನೆಲವೇ ಕುಸಿಯುತ್ತಿದೆ ಎಂಬುದರ ಬಗ್ಗೆ ಸಿದ್ದರಾಮಯ್ಯಗೆ ಅರಿವಿಲ್ಲ. ಅವರ ಹಗುರ ಮಾತುಗಳಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ' ಎಂದು ತಿಳಿಸಿದರು.
ಜಾರಕಿಹೊಳಿ, ಈಶ್ವರಪ್ಪ ಒತ್ತಡ
ಪ್ರಭಾವಿ ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ಕಳೆದ ತಿಂಗಳು ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆ ನಂತರ ಸಚಿವ ಸಂಪುಟ ವಿಸ್ತರಣೆ ಬೇಡವೆಂದು ಶಾ ಹೇಳಿದ್ದಾರೆ ಎಂಬುದಾಗಿ ವರದಿಯಾಗಿತ್ತು. ಯಡಿಯೂರಪ್ಪನವರು ಎರಡು ದಿನಗಳ ನಂತರ ತೀರ್ಮಾನವಾಗಲಿದೆ ಎಂಬ ಹೇಳಿಕೆಯು ಮತ್ತೆ ಕುತೂಹಲವನ್ನು ಹುಟ್ಟು ಹಾಕಿದೆ.