ಗ್ರಾಮ ಲೆಕ್ಕಿಗ ಪದನಾಮ ಗ್ರಾಮ ಆಡಳಿತಾಧಿಕಾರಿಯಾಗಿ ಬದಲಾವಣೆ: ಆರ್‌.ಅಶೋಕ

ಗ್ರಾಮ ಲೆಕ್ಕಿಗ ಪದನಾಮ ಗ್ರಾಮ ಆಡಳಿತಾಧಿಕಾರಿಯಾಗಿ ಬದಲಾವಣೆ: ಆರ್‌.ಅಶೋಕ

ಚಿಕ್ಕಮಗಳೂರು: ಗ್ರಾಮ ಲೆಕ್ಕಿಗ (ವಿಎ)ಪದನಾಮವನ್ನು ಗ್ರಾಮ ಆಡಳಿತಾಧಿಕಾರಿ ಎಂದು ಬದಲಾಯಿಸಲು, ಕಾರ್ಯನಿರ್ವಹಣೆಗೆ ಅವರಿಗೆ 'ಟ್ಯಾಬ್‌' ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ನಗರದ ದಂಟರಮಕ್ಕಿ ಕೆರೆಯ ಪಕ್ಕದ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

'ಎಲ್ಲ ಗ್ರಾಮ ಆಡಳಿತಾಧಿಕಾರಿಗಳಿಗೆ 'ಟ್ಯಾಬ್‌' ನೀಡುವುದರಿಂದ ಕಾಗದ ವೆಚ್ಚ ತಪುತ್ತದೆ, ಕಾರ್ಯನಿರ್ವಹಣೆ ವೇಗ ಪಡೆಯುತ್ತದೆ. ಅವರು 'ಟ್ಯಾಬ್‌'ನಲ್ಲಿ ವಿವರ ಟೈಪ್‌ ಮಾಡಿ ಅಪ್‌ಲೋಡ್‌ ಮಾಡಬೇಕು' ಎಂದು ಹೇಳಿದರು.

'ಕಡತ ವಿಲೇವಾರಿ ಪ್ರಕ್ರಿಯೆ ಮತ್ತಷ್ಟು ಸರಳೀಕಣಗೊಳಿಸಲು ಈ ವ್ಯವಸ್ಥೆ ಜಾರಿಗಳಿಸಲಾಗುತ್ತಿದೆ. ಇದರಿಂದ ತ್ವರಿತವಾಗಿ ವಿಲೇವಾರಿ ಸಾಧ್ಯವಾಗಲಿದೆ' ಎಂದರು.

ಕಂದಾಯ ಇಲಾಖೆ ಬಹಳಷ್ಟು ದಾಖಲೆಗಳು ದೂಳು, ಗೆದ್ದಲು ಹಿಡಿದಿರುತ್ತವೆ. ಹೀಗಾಗಿ, ದಾಖಲೆಗಳ ಡಿಜಿಟಲೀಕರಣಕ್ಕೆ ತೀರ್ಮಾನಿಸಲಾಗಿದೆ. ಆರು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಮೊಬೈಲ್‌ ಫೋನ್‌ನಲ್ಲೇ ದಾಖಲೆ ಲಭಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಆರ್‌ಟಿಸಿ, ಪಹಣಿ ಮೊದಲಾದ ದಾಖಲೆಗಳು ಮೊಬೈಲ್‌ ಫೋನ್‌ನಲ್ಲಿ ಲಭಿಸುವಂತಾದರೆ ಜನರಿಗೆ ಅನುಕೂಲವಾಗುತ್ತದೆ.

ಕಾಗದ ವೆಚ್ಚ, ದಾಖಲೆಗಾಗಿ ಕಚೇರಿಗೆ ಅಲೆಯುವುದು, ಅದುಇದು (ಲಂಚ) ಕೊಡುವುದು ತಪ್ಪುತ್ತದೆ ಎಂದರು.

ರಾಜ್ಯದಲ್ಲಿ ಡ್ರೋಣ್‌ ಸಮೀಕ್ಷೆ ಆರಂಭಿಸಿದ್ದೇವೆ. ಮನೆ, ಜಮೀನು ಮೊದಲಾದವುಗಳ ಮೋಜಣಿ ಬ್ರಿಟಿಷರ ಕಾಲದಲ್ಲಿ ನಡೆದಿತ್ತು, ನಂತರ ನಡೆದಿಲ್ಲ. ಕೇಂದ್ರ ಸರ್ಕಾರ ಸಮೀಕ್ಷೆಗೆ ನೆರವು ಒದಗಿಸಿದೆ,

ರಾಜ್ಯ ಸರ್ಕಾರ ₹ 280 ಕೋಟಿ ಒದಗಿಸಿದೆ. ಎಲ್ಲ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.