ಕ್ಯಾನ್ಸರ್‌ಗೆ ಪ್ರಾಥಮಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆಯಿರಿ: ಜಿಲ್ಲಾಧಿಕಾರಿ ಆರ್.ಲತಾ

ಬೆಂಗಳೂರು ಗ್ರಾಮಾಂತರ ಜಿಲ್ಲೆ : ಮನುಕುಲಕ್ಕೆ ಅಂಟಿದ ಬಹುದೊಡ್ಡ ಖಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ಖಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಣ ಮಾಡಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ 'ವಿಶ್ವ ಕ್ಯಾನ್ಸರ್ ಜಾಗೃತಿ ದಿನ' ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ಎಂಬ ಭಯಾನಕ ಖಾಯಿಲೆಗೆ ತುತ್ತಾದ ರೋಗಿಯು ಮಾನಸಿಕವಾಗಿ, ದೈಹಿಕವಾಗಿ ತೀವ್ರವಾಗಿ ಕುಗ್ಗುತ್ತಾನೆ. ವಿಜ್ಞಾನ ಸಾಕಷ್ಟು ಬೆಳೆದಿದ್ದರೂ ಕ್ಯಾನ್ಸರ್ ಬಂದರೆ ಸಾವು ಎಂಬ ಭಾವನೆ ಜನರಲ್ಲಿ ಹುಟ್ಟಿದೆ. ಆದರೆ ಆರಂಭದಲ್ಲೇ ಎಚ್ಚರಿಕೆಯಿಂದಿದ್ದರೆ ಬಹಳಷ್ಟು ಮಟ್ಟಿಗೆ ಕ್ಯಾನ್ಸರ್ ರೋಗ ನಿಯಂತ್ರಣ ಸಾಧ್ಯವಾಗುತ್ತದೆ. ಯುವ ಜನರು ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. 'ನಮ್ಮ ದನಿಗಳನ್ನು ಕೂಡಿಸೋಣ ಮತ್ತು ಕ್ರಮ ಕೈಗೊಳ್ಳೋಣ', ಎಂಬುದು ಪ್ರಸಕ್ತ ವರ್ಷದ ಕ್ಯಾನ್ಸರ್ ಜಾಗೃತಿ ದಿನದ ಘೋಷ ವಾಕ್ಯವಾಗಿದ್ದು, ನಾವೆಲ್ಲರೂ ಕ್ಯಾನ್ಸರ್ ರೋಗದ ವಿರುದ್ಧ ಹೋರಾಡಬೇಕು ಎಂದರು.
ಕ್ಯಾನ್ಸರ್‌ಗೆ ಒಳಗಾದವರ ಸಂಖ್ಯೆ ಹತ್ತು ಮಿಲಿಯನ್ ದಾಟಿದೆ. ಕ್ಯಾನ್ಸರ್ ರೋಗ ತಡೆಯಲು ಜಾಗೃತಿ ಬಹಳ ಮುಖ್ಯವಾಗಿದೆ. ಮಕ್ಕಳು ಹೆಚ್ಚಾಗಿ ಜಂಕ್‌ಫುಡ್‌ಗಳಿಂದ ದೂರವಿರಬೇಕು. ಆದಷ್ಟು ಮನೆಯ ಊಟವನ್ನು ಸೇವಿಸಬೇಕು. ದಿನನಿತ್ಯದ ಆಹಾರ ಸೇವನೆ ಕ್ರಮದಲ್ಲಿ ಅವಶ್ಯವಿರುವ ಪೌಷ್ಟಿಕಾಂಶ ಮತ್ತು ವಿಟಮಿನ್ ಆಹಾರಗಳನ್ನು ಸೇವನೆ ಮಾಡಿದರೆ ಕ್ಯಾನ್ಸರ್ ತಡೆಗಟ್ಟಬಹುದು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರೇವಣಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ಯಾನ್ಸರ್ ಖಾಯಿಲೆ ಎದುರಿಸಲು ಮಾನಸಿಕ ಶಕ್ತಿ ಅಗತ್ಯ. ಹತ್ತಿರದ ಆಸ್ಪತ್ರೆಗಳಿಗೆ ತೆರಳಿ, ತಪಾಸಣೆ ಮಾಡಿಸಿಕೊಂಡಲ್ಲಿ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬಹುದು. ಆಧುನಿಕ ತಂತ್ರಜ್ಞಾನದ ನೆರವಿನಿಂದ ಖಾಯಿಲೆಯಿಂದ ಗುಣಪಡಿಸಲು ಸಾಧ್ಯ, ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಧೂಮಪಾನ, ಮದ್ಯಪಾನದಂತಹ ವ್ಯಸನಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದರು.
ಸಂಪನ್ಮೂಲ ವ್ಯಕ್ತಿಗಳು, ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಜಿಲ್ಲಾ, ತಾಲ್ಲೂಕು, ಗ್ರಾಮೀಣ ಮಟ್ಟದಲ್ಲಿನ ಪ್ರದೇಶದ ಜನರಿಗೆ ಕ್ಯಾನ್ಸರ್ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕು. ತಿಂಗಳಿಗೊಂದು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಆಯೋಜಿಸಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು, ಐದರಿಂದ ಹತ್ತು ಸಾವಿರ ಗ್ರಾಮೀಣ ಜನರಿಗೆ ಕ್ಯಾನ್ಸರ್ ತಪಾಸಣೆ ನಡೆಸಿ ಕ್ಯಾನ್ಸರ್ ರೋಗ ಕಂಡುಬಂದಲ್ಲಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಜನರು ಆರೋಗ್ಯ ಕಾರ್ಡ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಜಯೇಂದ್ರ.ಬಿ.ಕೆ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಮುರಳಿ ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಮಾಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಧರ್ಮೇಂದ್ರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸೀಮಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ನಾಗೇಶ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಗೋವಿಂದರಾಜು, ಸಾರ್ವಜನಿಕ ಆಸ್ಪತ್ರೆ ಪ್ರಸೂತಿರೋಗ ತಜ್ಞರು ಡಾ.ಸೋನಿಯಾ, ರೆಡ್ ಕ್ರಾಸ್ ಸಂಯೋಜಕರು ಡಾ. ದಾಮೋದರ್ ಸೇರಿದಂತೆ ಜಿಲ್ಲಾ ಸರ್ವೇಕ್ಷಣ ಘಟಕದ ಸಿಬ್ಬಂದಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಎನ್‌ಸಿಸಿ ವಿದ್ಯಾರ್ಥಿಗಳು, ರೇವಾ ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅಸಂಕ್ರಾಮಿಕ ರೋಗಗಳ ಘಟಕದ 'ವಿಶ್ವ ಕ್ಯಾನ್ಸರ್ ಜಾಗೃತಿ ದಿನ'ದ ಕುರಿತು ಅರಿವು ಮೂಡಿಸುವ ವಾಹನಕ್ಕೆ ಹಸಿರು ನಿಶಾನೆ ತೋರಲಾಯಿತು.