ಕಾರು ಚಾಲಕನಿಂದ ದೌರ್ಜನ್ಯ ಪ್ರಕರಣ: ಇದೊಂದು ಡ್ರಾಮಾ ಎಂದ ಬಿಜೆಪಿ, ತಿರುಗೇಟು ಕೊಟ್ಟ ಡಿಸಿಡಬ್ಲ್ಯು ಮುಖ್ಯಸ್ಥೆ

ಕಾರು ಚಾಲಕನಿಂದ ದೌರ್ಜನ್ಯ ಪ್ರಕರಣ: ಇದೊಂದು ಡ್ರಾಮಾ ಎಂದ ಬಿಜೆಪಿ, ತಿರುಗೇಟು ಕೊಟ್ಟ ಡಿಸಿಡಬ್ಲ್ಯು ಮುಖ್ಯಸ್ಥೆ

ವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​​ ಅವರನ್ನು ಕಾರಿನಲ್ಲಿ​ ಎಳೆದೊಯ್ದ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ದೆಹಲಿ ಪೊಲೀಸರ ಮೇಲೆ ಕಳಂಕ ಹೊರಿಸಲು ಆಮ್​ ಆದ್ಮಿ ಪಾರ್ಟಿ ನೇಮಿಸಿದ ಸ್ವಾತಿ ಮಾಲಿವಾಲ್​ ಆಡಿರುವ ಡ್ರಾಮಾ ಇದು ಎಂದು ಬಿಜೆಪಿ ಆರೋಪ ಮಾಡಿದೆ.

ಇದಕ್ಕೆ ಸ್ವಾತಿ ಅವರು ತಿರುಗೇಟು ನೀಡಿದ್ದಾರೆ.

ಘಟನೆಯ ಬಗ್ಗೆ ಶುಕ್ರವಾರ ಅನುಮಾನ ವ್ಯಕ್ತಪಡಿಸಿದ ಬಿಜೆಪಿ, ಆರೋಪ ಮಾಡಿರುವ ವ್ಯಕ್ತಿ ಆಮ್​ ಆದ್ಮಿ ಪಕ್ಷದ ಸದಸ್ಯೆ ಮತ್ತು ಆಕೆಯ ಡ್ರಾಮಾ ಕುತಂತ್ರದ ಭಾಗವಾಗಿದ್ದು, ಇದೀಗ ಬಟಾಬಯಲಾಗಿದೆ ಎಂದಿದೆ. ದೆಹಲಿ ಪೊಲೀಸರನ್ನು ನಿರುತ್ಸಾಹಗೊಳಿಸಿ, ಕೇಂದ್ರ ಸರ್ಕಾರದ ಮೇಲೆ ದಾಳಿ ಮಾಡುವ ತಂತ್ರ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು ಸ್ವಾತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ, ಒಂದು ಸುದ್ದಿ ವಾಹಿನಿ ಮತ್ತು ಎಎಪಿ ಒಟ್ಟಾಗಿ ದೆಹಲಿ ಪೊಲೀಸರನ್ನು ದೂಷಿಸಲು ಈ ಸಂಚು ರೂಪಿಸಿದ್ದಾರೆ. ಆದರೆ, ಅದು ವಿಫಲವಾಗಿದೆ ಎಂದಿದ್ದಾರೆ.

ಬಿಜೆಪಿ ಸಂಸದ ಮನೋಜ್ ತಿವಾರಿ ಸಹ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ವಾತಿ ಮಾಲಿವಾಲ್​ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ, ಎಎಪಿ ಶಾಸಕನ ಪಕ್ಕದಲ್ಲಿ ನಿಂತು ಪೋಸ್ ನೀಡುತ್ತಿರುವ ಚಿತ್ರವನ್ನು ತಿವಾರಿ ಜೂಮ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಆರೋಪಿಯನ್ನು ಶೀಘ್ರವಾದಿ ಬಂಧಿಸಿದ್ದಕ್ಕೆ ದೆಹಲಿ ಪೊಲೀಸರಿಗೆ ತಿವಾರಿ ಶ್ಲಾಘಿಸಿದ್ದು, ಈ ಘಟನೆ ವ್ಯವಸ್ಥಿತ ಡ್ರಾಮಾ ಎಂದು ಕರೆದಿದ್ದಾರೆ.

ಸ್ವಾತಿ ಮಾಲಿವಾಲ್​ ತಿರುಗೇಟು
ಆರೋಪಗಳಿಗೆ ತಿರುಗೇಟು ನೀಡಿರುವ ಸ್ವಾತಿ ಮಾಲಿವಾಲ್​, ನನ್ನ ಬಗ್ಗೆ ಕೊಳಕು ಸುಳ್ಳು ಹೇಳಿದರೆ ನಾನು ಹೆದರಿಕೊಳ್ಳುತ್ತೇನೆಂದು ಭಾವಿಸಿರುವವರಿಗೆ ನಾನೊಂದು ಮಾತು ಹೇಳುತ್ತೇನೆ. ನಾನು ಈ ಕ್ಷಣಿಕ ಜೀವನದಲ್ಲಿ ನನ್ನ ತಲೆಯ ಮೇಲೆ ಸಾವನ್ನು ಕಟ್ಟಿಕೊಂಡು ಅನೇಕ ದೊಡ್ಡ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮೇಲೆ ಅನೇಕ ಬಾರಿ ದಾಳಿ ಮಾಡಿದರೂ ನನ್ನ ಕೆಲಸದಿಂದ ಹಿಂಜರಿಯಲಿಲ್ಲ. ನನ್ನ ಮೇಲಿನ ಪ್ರತಿಯೊಂದು ಕ್ರೌರ್ಯ, ನನ್ನೊಳಗೆ ಮತ್ತು ಕಿಚ್ಚು ಹಚ್ಚಿದೆ. ನನ್ನ ಧ್ವನಿಯನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ನಾನು ಬದುಕಿರುವವರೆಗೂ ಹೋರಾಡುತ್ತಲೇ ಇರುತ್ತೇನೆ ಎಂದು ಸ್ವಾತಿ ಮಾಲಿವಾಲ್​ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.