ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ: ಮಾಜಿ ಸಿಎಂ ಎಚ್.ಡಿ.ಕೆ

ಶಿವಮೊಗ್ಗ: ಇಂದು ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ. ಅವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ? ಎಂದು ಹೇಳುವ ಮೂಲಕ ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಸುರ್ಜೆವಾಲ ಹೇಳಿಕೆಗೆ ಮಾಜಿ ಸಿಎಂ ಎಚ್.ಕುಮಾರಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಆಪರೇಷನ್ ಕಮಲದ ಬಳಿಕದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿ. ಕಾಂಗ್ರೆಸ್ ಬಿಜೆಪಿಯ ಬಿ ಟೀಮೋ ಜೆಡಿಎಸ್ ಬಿ ಟೀಮೋ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅಶ್ವತ್ಥ ನಾರಾಯಣ ರಾಮನಗರದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ಹೋಮ ನಡೆಯುತ್ತಿದ್ದ ಜಾಗಕ್ಕೂ ಹೋಗದೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಸರಿಯಲ್ಲ ಎಂದರು.
ವಿಜಯೇಂದ್ರ ಮಂಡ್ಯದಲ್ಲಿ ಮನೆಯನ್ನಾದರೂ ಮಾಡಲಿ. ಅರಮನೆಯನ್ನಾದರೂ ಮಾಡಲಿ ಅಥವಾ ಶಿವಮೊಗ್ಗದಲ್ಲಿ ಕಟ್ಟಿರುವಂತೆ ದೊಡ್ಡ ದೊಡ್ದ ವಿದ್ಯಾಸಂಸ್ಥೆ ಹಾಗೂ ಕಟ್ಟಡವನ್ನಾದರೂ ಕಟ್ಟಲಿ ಬೇಡ ಅಂದವರು ಯಾರು ಅದರಿಂದ ನಮಗೇನು ತೊಂದರೆ ಇಲ್ಲ ಎಂದರು.
ಸರ್ಕಾರಿ ನೌಕರರಿಂದ ದೊಡ್ದ ದೊಡ್ದ ಸನ್ಮಾನ ಮಾಡಿಸಿಕೊಂಡವರು ಈಗ ಎಲ್ಲಿ ಹೋದರು? 7 ನೇ ವೇತನ ಆಯೋಗದ ಜಾರಿ ಕುರಿತಾಗಿ ನೌಕರರಿಗೆ ಅಸಮಾಧಾನ ಇದೆ. ನಿಮ್ಮ ಪರವಾಗಿ ಯಾರಿದ್ದಾರೆ ಎಂಬುದು ತಿಳಿದುಕೊಳ್ಳಲಿ. ಯಾರು ನಿಮ್ಮ ಪರ ಕೆಲಸ ಮಾಡಿದ್ದರು ಎಂಬುದನ್ನು ನೌಕರರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಶಿವಮೊಗ್ಗದ ಅಭ್ಯರ್ಥಿ ಕುರಿತು ಶೀಘ್ರದಲ್ಲೇ ತಿಳಿಸುತ್ತೇನೆ. ಪಂಚರತ್ನ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಭದ್ರಾವತಿಯಲ್ಲಿ ಪಂಚರತ್ನ ಯಾತ್ರೆಗೆ ಬೆಂಬಲ ವ್ಯಕ್ತವಾಗಿದೆ. ಜನರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನೀವೇ ನೋಡುತ್ತಿದ್ದೀರಾ ಹೇಗಿದೆ ಜನರ ಪ್ರತಿಕ್ರಿಯೆ ಎಂಬುದು ಎಂದು ಹೇಳಿದರು.