ಕಲಬುರಗಿ ರೈತರಿಗೆ ಗುಡ್‌ನ್ಯೂಸ್ : 78 ಕಡಲೆ ಕಾಳು ಖರೀದಿ ಕೇಂದ್ರಗಳ ಸ್ಥಾಪನೆ

ಕಲಬುರಗಿ : ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ 78 ಕಡಲೆ ಕಾಳು ಖರೀದಿ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯಕ್ಷ ಯಶವಂತ ವಿ. ಗುರುಕರ್ ಮಾಹಿತಿ ನೀಡಿದ್ದಾರೆ.
78 ಕಡಲೆ ಕಾಳು ಖರೀದಿ ಕೇಂದ್ರಗಳ ಸ್ಥಾಪನೆಯಿಂದಾಗಿ ಕಡಲೆ ಕಾಳು ಬೆಳೆದ ರೈತರು ಹತ್ತಿರದ ಖರೀದಿ ಕೇಂದ್ರಕ್ಕೆ ತೆರಳಿ 2023ರ ಮಾರ್ಚ್ 31ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ರೈತರಿಂದ ಖರೀದಿ ಮಾಡುವ ಕಾಲಾವಧಿಯನ್ನು 2023ರ ಮೇ 16 ರವರೆಗೆ ನಿಗದಿಪಡಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಲಬುರಗಿ ತಾಲೂಕಿನಲ್ಲಿ 13, ಸೇಡಂ ತಾಲೂಕಿನಲ್ಲಿ 11, ಅಫಜಲಪುರ ತಾಲೂಕಿನಲ್ಲಿ 8, ಆಳಂದ ತಾಲೂಕಿನಲ್ಲಿ 12, ಚಿಂಚೋಳಿ ತಾಲೂಕಿನಲ್ಲಿ 7, ಚಿತ್ತಾಪುರ ತಾಲೂಕಿನಲ್ಲಿ 20 ಹಾಗೂ ಜೇವರ್ಗಿ ತಾಲೂಕಿನಲ್ಲಿ 6 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅಷ್ಟೇ ಅಲ್ಲದೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಕಡಲೆಕಾಳು ಪ್ರತಿ ಕ್ವಿಂಟಾಲ್‍ಗೆ 5335 ರೂ. ಗಳ ಬೆಂಬಲ ಬೆಲೆಯ ದರದಲ್ಲಿ ಖರೀದಿ ಮಾಡಲಾಗುತ್ತದೆ. ಪ್ರತಿ ಎಕರೆಗೆ 4 ಕ್ವಿಂಟಾಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 15 ಕ್ವಿಂಟಾಲ್‌ನಂತೆ ಎಫ್‌ಎಕ್ಯೂ ಗುಣಮಟ್ಟದ ಕಡಲೆ ಕಾಳುಗಳನ್ನು ಮಾತ್ರ ಖರೀದಿಸಲಾಗುತ್ತದೆ.
ಕಡಲೆಕಾಳು ಖರೀದಿಸುವ ಬಗ್ಗೆ ರೈತ ಸಮುದಾಯಕ್ಕೆ ಯಾವುದೇ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಕಲಬುರಗಿ ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಅನೀಲಕುಮಾರ ಹಾದಿಮನಿ ಮೊಬೈಲ್ ಸಂಖ್ಯೆ 7899199990 ಮೂಲಕ ಸಂಪರ್ಕಿಸಬಹುದಾಗಿದೆ.