'ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ಧಿ ಇಲ್ಲದಾಗಿದೆ!'

'ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ಧಿ ಇಲ್ಲದಾಗಿದೆ!'

ಬೆಂಗಳೂರು, ಜ.18: ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ತರಾಟೆಗೈದಿರುವ ಕಾಂಗ್ರೆಸ್, 'ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ' ಎಂದು ವ್ಯಂಗ್ಯವಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ (Karnataka Congress), ತೇಜಸ್ವಿ ಸೂರ್ಯನಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವಂತಹ ತುರ್ತು ಏನಿತ್ತು ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.

ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ ಎಂದವರ ತಲೆ ಸೀಳಿದರೆ ನಯಾಪೈಸೆ ಬುದ್ದಿ ಇಲ್ಲದಾಗಿದೆ! ಅನಾಹುತ ಸಂಭವಿಸಿದ್ದರೆ ಬಲಿಯಾಗುವ ಜೀವಗಳಿಗೆ ಹೊಣೆ ಯಾರಾಗುತ್ತಿದ್ದರು? ತೇಜಸ್ವಿ ಸೂರ್ಯ ಎಲ್ಲಾ ಕಡೆಯೂ ತನ್ನ ಮಕ್ಕಳಾಟ ಆಡಲು ಹೋಗುವುದೇಕೆ? ಎಂದು ತರಾಟೆಗೈದಿದೆ.

ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆದದ್ದು ಶಿಕ್ಷಾರ್ಹ ಅಪರಾಧ, ವಿಮಾನಯಾನ ಸಂಸ್ಥೆ ಈ ಪ್ರಕರಣ ಮುಚ್ಚು ಹಾಕಲು ಯತ್ನಿಸಿದ್ದೇಕೆ? ಬಿಜೆಪಿಗೊಂದು ಕಾನೂನು, ಇತರರಿಗೊಂದು ಕಾನೂನು ಇದೆಯೇ ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿರುವ ಕಾಂಗ್ರೆಸ್, ಎದೆ ಸೀಳಿದರೆ ನಾಲ್ಕಕ್ಷರ ಬರುವುದಿಲ್ಲ ಎನ್ನುವ ತೇಜಸ್ವಿ ಸೂರ್ಯ ಅವರಲ್ಲಿ ಈಗ ಬಾಯಿ ತೆರೆದರೆ ನಾಲ್ಕು ಮಾತೇ ಹೊರಡುತ್ತಿಲ್ಲವೇಕೆ? ಎಂದು ವ್ಯಂಗ್ಯವಾಡಿದೆ.

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ಹಾಗೂ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಡಿಸೆಂಬರ್ 10, 2022ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಚೆನ್ನೈ-ತಿರುಚ್ಚಿ ಇಂಡಿಗೋ ವಿಮಾನವೊಂದರ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರೆಂದು ಆರೋಪ ಕೇಳಿಬಂದಿದೆ.

ಪ್ರಯಾಣಿಕರೊಬ್ಬರು ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರೆಂಬ ಅಂಶವನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಡಿಜಿಸಿಎ ಅಧಿಕಾರಿಗಳು ದೃಢೀಕರಿಸಿದ್ದರೂ ಆ ಪ್ರಯಾಣಿಕ ತೇಜಸ್ವಿ ಸೂರ್ಯ ಆವರಾಗಿದ್ದರೇ ಎಂಬುದನ್ನು ದೃಢೀಕರಿಸಲು ನಿರಾಕರಿಸಿದ್ದಾರೆ. ಆದರೆ ಘಟನೆಯ ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರ ಪ್ರಕಾರ ಆ ಪ್ರಯಾಣಿಕ ತೇಜಸ್ವಿ ಸೂರ್ಯ ಅವರೇ ಆಗಿದ್ದರು ಹಾಗೂ ಅವರ ಕೃತ್ಯಕ್ಕೆ ಕ್ಷಮೆ ಕೋರುವಂತೆ ಮಾಡಲಾಯಿತು ಎಂದು ಹೇಳಿರುವುದಾಗಿ thenewsminute.com ವರದಿ ಮಾಡಿತ್ತು. ಈ ಬಗ್ಗೆ ತನಿಖೆಗೆ ಕಾಂಗ್ರೆಸ್ ಪಕ್ಷ ಸರಕಾರವನ್ನು ಒತ್ತಾಯಿಸಿದೆ.