ಊಟ-ತಿಂಡಿ ಬಿಲ್ ಪಾಸ್ಗೂ ಲಂಚ ತಿನ್ನಲು ಮುಂದಾದ ಪ್ರಿನ್ಸಿಪಾಲ್; ಲೋಕಾಯುಕ್ತ ಬಲೆಗೆ ಶಿಕ್ಷಣಾಧಿಕಾರಿ..

ತುಮಕೂರು: ಊಟ-ತಿಂಡಿಯ ಕುರಿತಂತೆ ಹೋಟೆಲ್ ಬಿಲ್ ಪಾಸ್ ಮಾಡಲಿಕ್ಕೂ ಲಂಚ ತಿನ್ನಲು ಮುಂದಾದ ಶಿಕ್ಷಣ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಿಐಇಟಿ) ಪ್ರಾಂಶುಪಾಲ ರಾಮಕೃಷ್ಣಯ್ಯ ಆರೋಪಿ.
ತುಮಕೂರು ಲೋಕಾಯುಕ್ತ ಡಿವೈಎಸ್ಪಿ ರವೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಧುಗಿರಿ ಶೈಕ್ಷಣಿಕ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಿಐಇಟಿ) ಪ್ರಾಂಶುಪಾಲ ರಾಮಕೃಷ್ಣಯ್ಯ ಅವರನ್ನು ಲಂಚ ಪಡೆಯುವಾಗಲೇ ಬಲೆಗೆ ಕೆಡವಿಕೊಂಡಿದ್ದಾರೆ.
ಊಟ-ತಿಂಡಿಯ ಬಾಬ್ತು ಹೋಟೆಲ್ ಬಿಲ್ ಪಾಸ್ ಮಾಡಲು ರಾಮಕೃಷ್ಣಯ್ಯ 17 ಸಾವಿರ ರೂ. ಲಂಚ ಕೇಳುತ್ತಿದ್ದಾರೆ ಎಂಬುದಾಗಿ ಹನುಮಂತರಾಜು ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ರಾಮಕೃಷ್ಣಯ್ಯ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.