ಸಂಚಾರ ನಿಯಮ ಉಲ್ಲಂಘಿಸಿದ್ದ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ: ಈ ವಿಧಾನ ಅನುಸರಿಸಿ, ಆನ್ ಲೈನ್ ಮೂಲಕವೂ ಪಾವತಿಸಿ

ಬೆಂಗಳೂರು: ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಂಚಾರ ಪೊಲೀಸ್ ಇಲಾಖೆಯ ಸಭೆಯಲ್ಲಿ ಚರ್ಚಿಸಿದಂತೆ ಸಂಚಾರ ನಿಯಮ ಉಲ್ಲಂಘಿಸಿದಂತ ವಾಹನ ಸವಾರರಿಗೆ ವಿಧಿಸಲಾಗಿದ್ದಂತ ದಂಡ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿರುವಂತ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಸಲೀಂ ಅವರು, ಸಂಚಾರ ನಿಯಮ ಉಲ್ಲಂಘಿಸಿದಂತ ವಾಹನ ಸಾವರರ ಮೇಲೆ ಶೇ.90ರಷ್ಟು ಆನ್ ಲೈನ್ ಮೂಲಕವೇ ದಂಡ ಹಾಕುತ್ತಿದ್ದೇವೆ. ನಿಯಮ ಉಲ್ಲಂಘಿಸಿದ ವಾಹ ಮಾಲೀಕರಿಗೆ ದಂಡ ಕಟ್ಟುವಂತೆ ನೋಟಿಸ್ ಕೂಡ ನೀಡಲಾಗುತ್ತಿದೆ. ಆದ್ರೇ ಬಹಳಷ್ಟು ವಾಹನ ಸಾವರರು ನೋಟಿಸ್ ಗೆ ಪ್ರತಿಕ್ರಿಯಿಸಿರಲಿಲ್ಲ ಎಂದರು.
ನೋಟಿಸ್ ನೀಡಿದರು ದಂಡ ಶುಲ್ಕ ಪಾವತಿಸದಂತ ವಾಹನ ಸವಾರರಿಂದ ದಂಡ ವಸೂಲಿಯೇ ಸವಾಲಾಗಿ ಪರಿಣಮಿಸಿತ್ತು. ಈ ಹಿನ್ನಲೆಯಲ್ಲಿಯೇ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಂತ ದಂಡ ಶುಲ್ಕವನ್ನು ಪಾವತಿಗೆ ಅನುಕೂಲ ಆಗುವಂತ ನಿಟ್ಟಿನಲ್ಲಿ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಕೂಡ ಹೊರಡಿಸಿದೆ. ಸಂಚಾರ ನಿಯಮ ಉಲ್ಲಂಘಿಸಿದಂತ ವಾಹನ ಸವಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಬಾಕಿ ಇರುವ ದಂಡ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ
- ಕರ್ನಾಟಕ ಒನ್ ವೆಬ್ ಸೈಟ್ https://www.karnatakaone.gov.in/ ಗೆ ಭೇಟಿ ನೀಡಿ, ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
- ಪೇಟಿಎಂ ಆಪ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು, ಪಾವತಿಸಬಹುದಾಗಿದೆ.
- ಇದಲ್ಲದೇ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ನೀಡಿ, ದಂಡದ ವಿವರ ಪಡೆದು, ದಂಡವನ್ನು ಪಾವತಿಸಿ ರಶೀದಿ ಪಡೆಯಬಹುದು.
- ಸಂಚಾರ ಪೊಲೀಸರ ಬಳಿಯಲ್ಲಿ ತೆರಳಿ, ನಿಮ್ಮ ವಾಹನದ ನೊಂದಣಿ ಸಂಖ್ಯೆ ನೀಡಿ, ದಂಡದ ಮೊತ್ತವನ್ನು ಪಾವತಿಸಬಹುದು.
- ಸಂಚಾರ ನಿರ್ವಹಣ ಕೇಂದ್ರದ ಮೊದಲನೇ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ದೂರವಾಣಿ ಸಂಖ್ಯೆ 080-22942883, 22943381 ಗೆ ಸಂಪರ್ಕಿಸಿ ಪಡೆಯಬಹುದಾಗಿದೆ. ಶೇ.50ರಷ್ಟು ದಂಡ ಶುಲ್ಕದಲ್ಲಿ ವಿನಾಯ್ತಿ ಪಡೆದು ದಂಡದ ಮೊತ್ತ ಪಾವತಿಗೆ ಕೊನೆಯ ದಿನಾಂಕ 11-02-2023 ಆಗಿರುತ್ತದೆ.
ವರದಿ: ವಸಂತ ಬಿ ಈಶ್ವರಗೆರೆ