ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಅಂಗಡಿಯತ್ತ ನುಗ್ಗಿದ ಟ್ರ್ಯಾಕ್ಟರ್! ನಿಗೂಢ ವಿಡಿಯೋ ನೋಡಿ ದಂಗಾದ ಜನರು

ಲಖನೌ: ಶಾಪ್ ಒಂದರ ಮುಂದೆ ಪಾರ್ಕ್ ಮಾಡಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಚಾಲನೆಗೊಂಡು ಶಾಪ್ನತ್ತ ನುಗ್ಗಿ ಗಾಜನ್ನು ಪುಡಿ ಪುಡಿ ಮಾಡಿದ ಘಟನೆ ಉತ್ತರ ಪ್ರದೇಶದ ಬಿಜನೂರ್ ಎಂಬಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಸಿದ್ಧ ಶೂ ಅಂಗಡಿಯೊಂದರ ಹೊರಗೆ ನಿಂತಿದ್ದ ಟ್ರ್ಯಾಕ್ಟರ್ ಏಕಾಏಕಿ ಚಾಲಕನಿಲ್ಲದೇ ತಾನಾಗಿಯೇ ಸ್ಟಾರ್ಟ್ ಆಗಿ ಶೋರೂಂ ಒಳಗೆ ನುಗ್ಗಿ ಅಂಗಡಿಯ ಗ್ಲಾಸ್ ಗೇಟ್ ಒಡೆದು ಹಾಕಿದೆ. ನಂಬಲು ಅಸಾಧ್ಯವಾದ ಘಟನೆ ನೋಡಿ ಶೋರೂಮ್ನ ನೌಕರರು ಬೆಚ್ಚಿಬಿದ್ದಿದ್ದಾರೆ.
ಟ್ರ್ಯಾಕ್ಟರ್ ನುಗ್ಗಿ ಬರುವಾಗ ಪಕ್ಕಕ್ಕೆ ಸರಿದು ನಿಲ್ಲುವ ಮೂಲಕ ನೌಕರರು ಗಾಯಗಳಿಂದ ಪಾರಾಗಿದ್ದಾರೆ. ಅದೇ ವೇಳೆ ಅಂಗಡಿಯ ವ್ಯಕ್ತಿಯೊಬ್ಬರು ಮುಂದೆ ಬಂದು ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದರು. ಅಂಗಡಿಗೆ ಭಾರೀ ಹಾನಿಯಾಗಿದ್ದು, ಮುಂಭಾಗದ ಸಂಪೂರ್ಣ ಗಾಜಿನ ರಚನೆಯು ಒಡೆದು ಹೋಗಿದೆ.
ವರದಿಗಳ ಪ್ರಕಾರ ಮುಂಬರುವ ಹೋಳಿ ಹಬ್ಬದ ತಯಾರಿಗಾಗಿ ಪೊಲೀಸರು ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಶಾಂತಿ ಸಮಿತಿಯ ಸಭೆಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ಸಭೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಕಿಶನ್ ಕುಮಾರ್ ಕೂಡ ಭಾಗಿಯಾಗಿದ್ದರು. ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ಚಪ್ಪಲಿ ಅಂಗಡಿಯ ಮುಂದೆ ತನ್ನ ಟ್ರ್ಯಾಕ್ಟರ್ ನಿಲ್ಲಿಸಲಾಗಿತ್ತು. ಸರಿಸುಮಾರು ಒಂದು ಗಂಟೆಯ ನಂತರ ಪಾರ್ಕ್ ಮಾಡಿದ್ದ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಅಂಗಡಿಯತ್ತ ನುಗ್ಗಿತ್ತು. ಈ ಘಟನೆ ನಿಗೂಢತೆಗೂ ಸಾಕ್ಷಿಯಾಗಿದೆ.
ಒಂದೆಡೆ ಅಂಗಡಿ ಮಾಲೀಕನಿಗೆ ಈ ಘಟನೆಯಿಂದ ಭಾರೀ ನಷ್ಟವಾದರೆ, ಮತ್ತೊಂದೆಡೆ ಈ ವಿಲಕ್ಷಣ ಘಟನೆಯ ವಿಡಿಯೋ ಆನ್ಲೈನ್ನಲ್ಲಿ ಭಾರೀ ವೈರಲ್ ಆದ ನಂತರ ನಗರದ ಜನರು ಈ ಬಗ್ಗೆ ಚರ್ಚಿಸತೊಡಗಿದ್ದಾರೆ. ಆದರೆ, ಶೋರೂಮ್ನಲ್ಲಿ ಆಗಿರುವ ನಷ್ಟವನ್ನು ಭರಿಸುವಂತೆ ಶೂ ಶೋಮ್ ವ್ಯವಸ್ಥಾಪಕರು ಟ್ರ್ಯಾಕ್ಟರ್ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)