ಅಥಿಯಾ ಶೆಟ್ಟಿ ಲೆಹಂಗಾ ತಯಾರಿಸಲು 10 ಸಾವಿರ ಗಂಟೆ ಬೇಕಾಯ್ತು

ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್ಹೌಸ್ನಲ್ಲಿ ವಿವಾಹವಾದರು.
ಸೋಮವಾರ ದಂಪತಿ Instagramನಲ್ಲಿ ತಮ್ಮ ವಿವಾಹದ ಪೋಸ್ಟ್ ಕೂಡಾ ಶೇರ್ ಮಾಡಿದ್ದಾರೆ. ನಿಮ್ಮ ಬೆಳಕಿನಲ್ಲಿ ನಾನು ಹೇಗೆ ಪ್ರೀತಿಸಬೇಕೆಂದು ಕಲಿತೆ. ಇಂದು, ನಮ್ಮ ಅತ್ಯಂತ ಪ್ರೀತಿಪಾತ್ರರ ಜೊತೆಗೆ, ನಮಗೆ ಜೀವನದಲ್ಲಿ ಅಪಾರವಾಗಿ ಖುಷಿ, ಸಂತೋಷ ನೀಡಿದ ಮನೆಯಲ್ಲಿ ನಾವು ಮದುವೆಯಾದೆವು. ಕೃತಜ್ಞತೆ ಹಾಗೂ ಪ್ರೀತಿಯಿಂದ ಈ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದವನ್ನು ನಾವು ಬಯಸುತ್ತೇವೆ ಎಂದು ಬರೆದಿದ್ದರು. ವಿಶೇಷ ದಿನಕ್ಕಾಗಿ ಅಥಿಯಾ ಅವರು ಅನಾಮಿಕಾ ಖನ್ನಾ ಅವರ ಗುಲಾಬಿ ಬಣ್ಣದ ಚಿಕಂಕರಿ ಲೆಹೆಂಗಾವನ್ನು ಆಯ್ಕೆ ಮಾಡಿದ್ದಾರೆ. ಕೆಎಲ್ ರಾಹುಲ್ ಅವರು ಕಸೂತಿ ಮಾಡಿದ ಶೆರ್ವಾನಿಯಲ್ಲಿ ಮಿಂಚಿದರು.70 ಜನರ ಅತಿಥಿ ಪಟ್ಟಿಯನ್ನು ಮದುವೆಗೆ ಸಿದ್ಧಪಡಿಸಲಾಗಿತ್ತು. ಕೆಎಲ್ ರಾಹುಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಅವರು ಅನಾಮಿಕಾ ಖನ್ನಾ ಅವರ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದರು. ಈ ಸೂಕ್ಷ್ಮವಾದ ಲೆಹಂಗಾವನ್ನು ಕೈಯಿಂದ ತಯಾರಿಸಲಾಗುತ್ತದೆ. ಕೈಯಿಂದ ನೇಯ್ಗೆ ಮಾಡಲಾಗುವ ಈ ಲೆಹಂಗಾದ ಕಸೂತಿ ಕೆಲಸ ರೇಷ್ಮೆಯಲ್ಲಿ ತಯಾರಿಸಲಾಗುತ್ತದೆ. ಇದು ನಾಜೂಕಾದ ಕರಕುಶಲತೆಯಿಂದ ತುಂಬಿದ ರೇಷ್ಮೆಯ ಆರ್ಗನ್ಝಾದಿಂದ ಮಾಡಿದ ತೆಳುವಾದ ದುಪಟ್ಟಾವನ್ನು ಸಹ ಒಳಗೊಂಡಿದೆ. ವೋಗ್ಗೆ ನೀಡಿದ ಸಂದರ್ಶನದಲ್ಲಿ, ಡಿಸೈನರ್ ಅನಾಮಿಕಾ ಖನ್ನಾ ಅವರು ಲೆಹೆಂಗಾವನ್ನು ತಯಾರಿಸಲು ಸುಮಾರು 10,000 ಗಂಟೆಗಳನ್ನು ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸಿದರು. ಮದುವೆಯ ಲೆಹೆಂಗಾದ ಹಿಂದಿನ ಸ್ಫೂರ್ತಿ ಬಗ್ಗೆ ಅನಾಮಿಕಾ ಮಾತನಾಡಿದ್ದಾರೆ. ಈ ಲೆಹಂಗಾ ಹಿಂದಿನ ಸ್ಫೂರ್ತಿ ಅಥಿಯಾ ಶೆಟ್ಟಿ ಎಂದು ಬಹಿರಂಗಪಡಿಸಿದ್ದಾರೆ. ಅಥಿಯಾ ಅತ್ಯಂತ ಸೂಕ್ಷ್ಮವಾದ ಅಭಿರುಚಿ ಹೊಂದಿದ್ದಾಳೆ. ಅವಳು ವಧುವಾಗಲಿದ್ದಾಳೆ ಎಂಬ ಅಂಶದೊಂದಿಗೆ ಅವಳಿಗಾಗಿ ವಿಶೇಷವಾದ ಉಡುಗೆ ಸಿದ್ಧಪಡಿಸಿದೆ ಎಂದಿದ್ದಾರೆ. ವಿಪರೀತ ಮೇಕಪ್ ಇಲ್ಲದೆ ಅತ್ಯಂತ ಸರಳವಾದ ಲುಕ್ನಲ್ಲಿ ಕಂಡು ಬಂದಿದ್ದಾರೆ ಅಥಿಯಾ. ಮೇಕಪ್ ಹದವಾಗಿದ್ದು ಅವರನ್ನು ಮತ್ತಷ್ಟು ಚಂದ ಕಾಣುವಂತೆ ಮಾಡಿದೆ.