ಗರ್ಭೀಣಿ ಮೃತರಾಗಿದ್ದರೂ ಮಗುವ ಬದುಕಿಸಿದ ವೈದ್ಯರು
ಸರಕಾರಿ ಆಸ್ಪತ್ರೆ ಅಂದ್ರೆ ಬಹಳಷ್ಟು ಜನ ಮೂಗು ಮುರಿತಾರೆ. ಅದರಲ್ಲೂ ಸರಕಾರಿ ಆಸ್ಪತ್ರೆಯ ವೈದ್ಯರ ಮೇಲೆ ಸಾರ್ವಜನಿಕರಿಗೆ ನಂಬಿಕೆ ಅನ್ನೋದೆ ಕಡಿಮೆ. ಆದ್ರೆ ಗದಗನ ಸರಕಾರಿ ಆಸ್ಪತ್ರೆಯ ವೈದ್ಯರು ಇದಕ್ಕೆ ಹೊರತಾಗಿ ತಮ್ಮ ಸಾಧನೆ ತೋರಿಸಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿಯ ಅಣ್ಣಪೂರ್ಣ ಅಬ್ಬಿಗೇರಿ ಎಂಬ ತುಂಬು ಗರ್ಭಿಣಿಗೆ ಇದೇ ನವೆಂಬರ್ 4ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ತುಂಬು ಗರ್ಭಿಣಿಯಾಗಿದ್ದರೂ ಆಕೆಗೆ ಇನ್ನೂ ಹೆರಿಗೆ ನೋವು ಇರದೇ ಮೂರ್ಛೆ ರೋಗ ಕಾಣಿಸಿಕೊಂಡು ತೀವ್ರ ಅಸ್ವಸ್ಥಳಾಗಿದ್ದರು. ಗದಗ ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಬರೋವಷ್ಟರಲ್ಲಿ ತಾಯಿ ಮೃತಳಾಗಿದ್ದಳು. ಆದ್ರೆ ಹೆರಿಗೆ ಆಸ್ಪತ್ರೆಯ ವೈದ್ಯರು ಆಕೆಯ ಆರೋಗ್ಯವನ್ನ ಪರಿಶೀಲನೆ ಮಾಡಿದಾಗ ಆಗಲೇ ಉಸಿರಾಟ ನಿಂತುಹೋಗಿತ್ತು. ಆದ್ರೆ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹಾರ್ಟ್ ಬೀಟ್ ಇನ್ನೂ ಬಡಿದುಕೊಳ್ಳುತ್ತಿತ್ತಂತೆ. ಹೀಗಾಗಿ ತಕ್ಷಣ ಅಲರ್ಟ್ ಆದ ವೈದ್ಯರು ಮಗುವನ್ನಾದರೂ ಬದುಕಿಸುಬಹುದು ಅಂತ ವೈದ್ಯರು ದಿಢೀರನೆ ಕಾರ್ಯಪ್ರವೃತ್ತರಾಗಿ ಕೆಲವೆ ನಿಮಿಷದಲ್ಲಿ ವೈದ್ಯರು ಜೀವಂತವಾಗಿ ಮಗುವನ್ನ ಹೊರತೆಗೆದಿದ್ದಾರೆ. ಹೆರಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಬಸನಗೌಡ ಕರಿಗೌಡರ ಮಾರ್ಗದರ್ಶನದಲ್ಲಿ ಈ ಅಪರೂಪದ ಆಪರೇಷನ್ ಕೈಗೆತ್ತಿಕೊಂಡಿದ್ದ ವೈದ್ಯರುಗಳಾದ ಡಾ. ವಿನೋದ್, ಡಾ. ಜಯರಾಜ್, ಡಾ. ಶೃತಿ ಮತ್ತು ಡಾ. ಕೀರ್ತನ್ ಅವರಿಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬಕು. ವೈದ್ಯೋ ನಾರಾಯಣ ಹರಿ ಅನ್ನೋ ಮಾತು ಇಲ್ಲಿ ಸತ್ಯವಾಗಿದೆ.